ಮಂಗಳೂರು: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ 27 ವರ್ಷದ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಹಣ ಹಾಗೂ ಐಫೋನ್ ಪಡೆದು ಬ್ಲ್ಯಾಕ್‌ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ಬೈಕ್ ರೈಡರ್ ಕಾರ್ತಿಕ್ ಕರ್ಕೇರನನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮೂಲದ ಯುವತಿಯ ದೂರಿನ ಮೇರೆಗೆ ಮರಕಡ, ಬಜಪೆ ನಿವಾಸಿ ಕಾರ್ತಿಕ್ ಕರ್ಕೇರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 64, 78, 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, 2026ರ ಫೆಬ್ರವರಿಯಲ್ಲಿ ಒಮಾನ್‌ನಲ್ಲಿ ಉದ್ಯೋಗದಲ್ಲಿದ್ದ ವೇಳೆ ಇನ್‌ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಆರೋಪಿ ಪ್ರೀತಿಸುವಂತೆ ಒತ್ತಾಯಿಸಿದ್ದು, ಸಂಪರ್ಕ ಕಡಿತಗೊಳಿಸಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಗೂ ಇತರೆ ರೀತಿಯಲ್ಲಿ ಬೆದರಿಕೆ ಹಾಕಿ ಮತ್ತೆ ಸಂಪರ್ಕದಲ್ಲಿರುವಂತೆ ಒತ್ತಾಯಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಮಂಗಳೂರಿಗೆ ಬಂದ ಬಳಿಕ ಮೇ.10ರಂದು ಇಬ್ಬರೂ ಭೇಟಿಯಾಗಿದ್ದು, ರಾತ್ರಿ ಲಾಡ್ಜ್‌ನಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ಆರೋಪಿ ನಿರಂತರವಾಗಿ ಹಣಕ್ಕಾಗಿ ಒತ್ತಡ ಹೇರಿ, ಐಫೋನ್ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿಯ ವಿವಾಹ ನಿಶ್ಚಯವಾದ ವಿಚಾರ ತಿಳಿದ ನಂತರ ಆಕೆಯ ಭಾವಿ ಪತಿಗೆ ಅವಹೇಳನಕಾರಿ ಸಂದೇಶ ಕಳುಹಿಸಿ, ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಐಫೋನ್ ಪಾಸ್‌ವರ್ಡ್ ವಿಚಾರವಾಗಿ ಕರೆ ಮಾಡಿದ ವೇಳೆ ಆರೋಪಿ ಸೋದರ ಸಂಬಂಧಿ ಮಹಿಳೆಯೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಯುವತಿ ಆರೋಪಿಸಿದ್ದಾರೆ.
ಈ ಸಂಬಂಧ ಮಂಗಳೂರು ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್ ಕರ್ಕೇರನನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
Post a Comment