ಮಂಗಳೂರು: ಕಚೇರಿಯ ಡಿ ಗ್ರೂಪ್ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಕಚೇರಿಯಲ್ಲಿ ಸೋಮವಾರ ಭಾರೀ ಹೈಡ್ರಾಮಾ ನಡೆಯಿತು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ಅಧಿಕಾರಿಯ ಕಚೇರಿಗೆ ತೆರಳಿ ತೀವ್ರ ತರಾಟೆಗೆ ತೆಗೆದುಕೊಂಡಿತು. ಸಂತ್ರಸ್ತೆಯ ಆರೋಪದ ಪ್ರಕಾರ, ಅಧಿಕಾರಿಯು ಪ್ರತಿ ಸೋಮವಾರ ಕಡ್ಡಾಯವಾಗಿ "ಹಸಿರು ಸೀರೆ" ಧರಿಸಿ ಬರಲು ಒತ್ತಾಯಿಸುತ್ತಿದ್ದಲ್ಲದೆ, ಹಣದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ದೂರಲಾಗಿದೆ.
ಈ ಆರೋಪಕ್ಕೆ ಪ್ರತಿಭಟನೆಯ ರೂಪವಾಗಿ ಪ್ರತಿಭಾ ಕುಳಾಯಿ ಸೇರಿದಂತೆ ಮಹಿಳಾ ತಂಡದ ಸದಸ್ಯರು ಕೂಡ ಹಸಿರು ಸೀರೆ ಧರಿಸಿ ಅಧಿಕಾರಿಯ ಕಚೇರಿಗೆ ತೆರಳಿ, "ನಾವೂ ಹಸಿರು ಸೀರೆ ಹಾಕಿಕೊಂಡು ಬಂದಿದ್ದೇವೆ, ಈಗ ನಮಗೆ ಏನು ಹೇಳುತ್ತೀರಿ?" ಎಂದು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಪ್ರತಿಭಾ ಕುಳಾಯಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಎಸಿಪಿ ಮೊಹಮ್ಮದ್ ನಜೀರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ತಂಡ ಆಗ್ರಹಿಸಿದೆ.
Post a Comment