ಮಂಗಳೂರು : 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ನಿರ್ಣಾಯಕ ಕೊಡುಗೆ ನೀಡಿದ್ದ ಭಾರತೀಯ ಸೇನೆಯ ಟಿ-55 ಯುದ್ಧ ಟ್ಯಾಂಕ್ ಇದೀಗ ಮಂಗಳೂರಿನ ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿದೆ. ರವಿವಾರ ಈ ಐತಿಹಾಸಿಕ ಟ್ಯಾಂಕ್ ಅನ್ನು ಅಧಿಕೃತವಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು.
1960ರ ಮಧ್ಯಭಾಗದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಟಿ-55 ಟ್ಯಾಂಕ್, ಸುಮಾರು ನಾಲ್ಕೈದು ದಶಕಗಳ ಕಾಲ ಆರ್ಮರ್ಡ್ ಕಾರ್ಪ್ಸ್‌ನ ಬೆನ್ನೆಲುಬಾಗಿ ಸೇವೆ ಸಲ್ಲಿಸಿತು. 2011ರಲ್ಲಿ ನಿವೃತ್ತಿಗೊಂಡ ಈ ಯುದ್ಧ ಟ್ಯಾಂಕ್, 1971ರ ಭಾರತ–ಪಾಕಿಸ್ತಾನ ಯುದ್ಧದ ಗರೀಬ್‌ಪುರ, ನೈನಾಕೋಟ್ ಹಾಗೂ ಬಸಂತರ್ ಯುದ್ಧಗಳಲ್ಲಿ ಭಾರತೀಯ ಸೇನೆಯ ವಿಜಯದ ಪ್ರಮುಖ ಅಸ್ತ್ರವಾಗಿತ್ತು.
36 ಟನ್ ತೂಕ ಹೊಂದಿರುವ ಈ ಟ್ಯಾಂಕ್, 100 ಎಂಎಂ ರೈಫಲ್ಡ್ ಗನ್, 7.62 ಎಂಎಂ ಕೊಆಕ್ಸಿಯಲ್ ಮೆಷಿನ್ ಗನ್ ಹಾಗೂ 12.7 ಎಂಎಂ ವಿಮಾನ ನಿರೋಧಕ ಗನ್‌ಗಳಿಂದ ಸಜ್ಜುಗೊಂಡಿದೆ. ವಿ-55 ವಿ-12 ಡೀಸೆಲ್ ಇಂಜಿನ್ ಹೊಂದಿರುವ ಈ ಟ್ಯಾಂಕ್ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಸಂಚರಿಸಬಲ್ಲದು. ಒಂದು ಬಾರಿ ಇಂಧನ ತುಂಬಿದರೆ ಸುಮಾರು 510 ಕಿಲೋಮೀಟರ್‌ವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದ್ದು, ಹೆಚ್ಚುವರಿ ಇಂಧನ ಟ್ಯಾಂಕ್‌ಗಳೊಂದಿಗೆ 600 ಕಿಲೋಮೀಟರ್‌ವರೆಗೆ ಸಾಗಬಹುದು. ನಾಲ್ವರು ಯೋಧರು ಈ ಟ್ಯಾಂಕ್ ಅನ್ನು ನಿರ್ವಹಿಸುತ್ತಿದ್ದರು.
ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಸ್ಥಾಪಿಸಲಾದ ಈ ಟಿ-55 ಟ್ಯಾಂಕ್, ಭಾರತೀಯ ಸೈನಿಕರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಸಂಕೇತವಾಗಿ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ. ಇತಿಹಾಸದ ಸುವರ್ಣ ಅಧ್ಯಾಯವನ್ನು ನೆನಪಿಸುವ ಈ ಯುದ್ಧ ಟ್ಯಾಂಕ್ ಇದೀಗ ಮಂಗಳೂರಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
Post a Comment