ಮಂಗಳೂರು, ಜು. 26: ₹5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಮೂಲದ ಬಾಬಾ ಆ್ಯಂಬುಲೆನ್ಸ್ ಚಾಲಕ ಜಲೀಲ್‌ಗಾಗಿ ಮಂಗಳೂರು ನಗರ ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಡ್ರಗ್ಸ್ ವಶಪಡಿಕೆ ಪ್ರಕರಣದ ತನಿಖೆ ವೇಳೆ ಜಲೀಲ್ ಹೆಸರು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ಜಲೀಲ್ ನಾಲ್ಕನೇ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಜಲೀಲ್ ಆ್ಯಂಬುಲೆನ್ಸ್ ಬಳಸಿಕೊಂಡು ಜಿಲ್ಲೆಯ ವಿವಿಧ ಭಾಗಗಳಿಗೆ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಉಳಿದ ಆರೋಪಿಗಳು ಬಂಧನಕ್ಕೊಳಗಾದ ಬೆನ್ನಲ್ಲೇ ಜಲೀಲ್ ತಲೆಮರೆಸಿಕೊಂಡಿದ್ದು, ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದಲ್ಲದೆ, ಆತ ಬಳಸುತ್ತಿದ್ದ ಆ್ಯಂಬುಲೆನ್ಸ್‌ನೊಂದಿಗೇ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನ ಪತ್ತೆಗಾಗಿ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಮಾಜಸೇವೆಯ ಮೂಲಕ ಸಾರ್ವಜನಿಕರಲ್ಲಿ ಉತ್ತಮ ಹೆಸರು ಗಳಿಸಿದ್ದ ಜಲೀಲ್ ಹೆಸರು ಇದೀಗ ಡ್ರಗ್ಸ್ ಜಾಲದ ತನಿಖೆಯಲ್ಲಿ ಕೇಳಿಬಂದಿರುವುದು ಬೆಳ್ತಂಗಡಿ ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Post a Comment