ಬೆಂಗಳೂರು, ಜು. 27: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಈ ವಾರದೊಳಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ, "ಈ ವಿಚಾರದಲ್ಲಿ ನೀವು (ಮಾಧ್ಯಮಗಳು) ಹೆಚ್ಚು ಆತುರದಲ್ಲಿದ್ದೀರಿ" ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.
ಇಂದು ದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದು, ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಾವೇರಿ, ಮಹದಾಯಿ, ಮೇಕೆದಾಟು, ಕೃಷ್ಣ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
"ನಾನು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ರಾಜ್ಯದ ಪ್ರಮುಖ ವಿಚಾರಗಳಲ್ಲಿ ಎಲ್ಲ ಸಂಸದರನ್ನು ಒಗ್ಗೂಡಿಸಲು ಮನವಿ ಮಾಡುತ್ತಿದ್ದೇನೆ. ರಾಜ್ಯದ ಹಿತಾಸಕ್ತಿಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಉದ್ದೇಶ" ಎಂದು ಹೇಳಿದರು.
ದೆಹಲಿಯ ಸಭೆಯ ಬಳಿಕ ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ರಾಜ್ಯದ ಹಿರಿಯ ನಾಯಕರು ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳೊಂದಿಗೆ ಬರ ಪರಿಸ್ಥಿತಿ ಮತ್ತು ನೀರಾವರಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು.
Post a Comment