Mangalore International Airport | "₹9 ಲಕ್ಷ ನಗದು, ಚಿನ್ನ, ಐಫೋನ್ ಇದ್ದ ಪರ್ಸ್ ಏರ್ಪೋರ್ಟ್‌ನಲ್ಲೆ ಬಾಕಿ ; ಮಾಲೀಕರಿಗೆ ಸುರಕ್ಷಿತವಾಗಿ ತಲುಪಿಸಿ ಶ್ಲಾಘನೆಗೆ ಪಾತ್ರರಾದ ಭದ್ರತಾ ಸಿಬ್ಬಂದಿ

ಮಂಗಳೂರು, ಜು. 26: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟಿದ್ದ ಸುಮಾರು ₹9 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ಅಮೂಲ್ಯ ವಸ್ತುಗಳಿದ್ದ ಪರ್ಸ್ ಅನ್ನು ಸಿಐಎಸ್‌ಎಫ್ (CISF) ಮತ್ತು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಪತ್ತೆಹಚ್ಚಿ, ಸೂಕ್ತ ಪರಿಶೀಲನೆಯ ಬಳಿಕ ಅದರ ನಿಜವಾದ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಶನಿವಾರ ಬೆಳಿಗ್ಗೆ ಸುಮಾರು 6.15ಕ್ಕೆ ವಿಮಾನ ನಿಲ್ದಾಣದ ಲ್ಯಾಂಡ್‌ಸೈಡ್ ಭದ್ರತಾ ಸಿಬ್ಬಂದಿ ವಿಠ್ಠಲ್ ಹೊಸಮನಿ ಅವರು ಕೆಳ ಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿದ್ದ ಬ್ಯಾಗೇಜ್ ಟ್ರಾಲಿಯ ಮೇಲೆ ಕಪ್ಪು ಬಣ್ಣದ ಸಣ್ಣ ಪರ್ಸ್ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿ ತಕ್ಷಣ ಸಿಐಎಸ್‌ಎಫ್‌ಗೆ ಮಾಹಿತಿ ನೀಡಿದರು. ಕೂಡಲೇ ಕ್ವಿಕ್ ರೆಸ್ಪೋನ್ಸ್ ತಂಡ (QRT) ಸ್ಥಳಕ್ಕೆ ಆಗಮಿಸಿತು.

ಸುರಕ್ಷತಾ ಕ್ರಮವಾಗಿ ಎಸ್‌ಒಸಿಸಿ (SOCC)ಗೆ ಮಾಹಿತಿ ನೀಡಲಾಗಿದ್ದು, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (BDDS) ಮತ್ತು ಶ್ವಾನದಳ ಪರ್ಸ್ ಅನ್ನು ಪರಿಶೀಲಿಸಿತು. ಯಾವುದೇ ಸ್ಫೋಟಕ ವಸ್ತು ಇಲ್ಲ ಎಂದು ದೃಢಪಟ್ಟ ಬಳಿಕ ಪರ್ಸ್ ತೆರೆಯಲಾಯಿತು.

ಪರ್ಸ್‌ನಲ್ಲಿ ಒಂದು ಪಾಸ್‌ಪೋರ್ಟ್, ಐಫೋನ್ ಮೊಬೈಲ್, ಚಿನ್ನದ ಉಂಗುರ, 500 ದಿರ್‌ಹಾಮ್, 10,000 ಅಮೆರಿಕನ್ ಡಾಲರ್, ಬೋರ್ಡಿಂಗ್ ಪಾಸ್ ಹಾಗೂ ಬ್ಯಾಂಕ್ ಕಾರ್ಡ್‌ಗಳು ಪತ್ತೆಯಾದವು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಎಸ್‌ಒಸಿಸಿ, ಪ್ರಯಾಣಿಕ ಈಗಾಗಲೇ ವಿಮಾನ ನಿಲ್ದಾಣದಿಂದ ಹೊರಟಿರುವುದನ್ನು ದೃಢಪಡಿಸಿತು. ಬಳಿಕ ಬೋರ್ಡಿಂಗ್ ಪಾಸ್‌ನ ಮಾಹಿತಿಯ ಆಧಾರದ ಮೇಲೆ ಸಂಬಂಧಿತ ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರ ಸಂಪರ್ಕ ಸಂಖ್ಯೆ ಪಡೆದು ಸಿಐಎಸ್‌ಎಫ್ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು.

ಈ ಪರ್ಸ್ ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX 814 ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ನಿಶಾಲ್ ಶಾಹಿಕ್ ಅವರದ್ದಾಗಿತ್ತು. ಮಾಹಿತಿ ಪಡೆದ ಅವರು ಮತ್ತೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಅಗತ್ಯ ದಾಖಲೆಗಳ ಪರಿಶೀಲನೆ ಹಾಗೂ ನಿಯಮಾನುಸಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸಿಐಎಸ್‌ಎಫ್ ಅಧಿಕಾರಿಗಳು ಪರ್ಸ್ ಅನ್ನು ಅದರ ನಿಜವಾದ ಮಾಲೀಕರಿಗೆ ಹಸ್ತಾಂತರಿಸಿದರು.

ತಮ್ಮ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಸಿಐಎಸ್‌ಎಫ್ ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಕಾರ್ಯವನ್ನು ಪ್ರಯಾಣಿಕ ನಿಶಾಲ್ ಶಾಹಿಕ್ ವಿಡಿಯೊ ಸಂದೇಶದ ಮೂಲಕ ಶ್ಲಾಘಿಸಿದ್ದಾರೆ.

Post a Comment

Previous Post Next Post