ಮಳೆ ಹಾನಿಗೀಡಾದ ಭವಾನಿ ಮನೆಗೆ ಇನಾಯತ್ ಅಲಿ ಭೇಟಿ; ₹50 ಸಾವಿರ ಧನಸಹಾಯ

ಮಂಗಳೂರು, ಜೂನ್ 13: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮನೆ ಹಾನಿಗೀಡಾಗಿ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನ ಕಾಪಿಗುಡ್ಡೆಯ ನಿವಾಸಿ ಭವಾನಿ ಅವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಕ್ಕೆ ಧೈರ್ಯ ತುಂಬಿದರು. ಅಲ್ಲದೆ ವೈಯಕ್ತಿಕವಾಗಿ ₹50 ಸಾವಿರ ಧನಸಹಾಯವನ್ನು ವಿತರಿಸಿದರು.

ಈ ಬಾರಿಯ ಮೊದಲ ಮಳೆಗೆ ಭವಾನಿ ಅವರ ಮನೆಗೆ ವ್ಯಾಪಕ ಹಾನಿಯಾಗಿದ್ದು, ಮನೆಯಲ್ಲಿ ಭವಾನಿ ಹಾಗೂ ಅವರ ಮೊಮ್ಮಗಳು ಮಾತ್ರ ವಾಸಿಸುತ್ತಿದ್ದಾರೆ. ಮನೆಯ ಹಲವು ಭಾಗಗಳು ಹಾನಿಗೊಳಗಾದ ಕಾರಣ ಸುರಕ್ಷಿತವಾಗಿರುವ ಒಂದೇ ಕೋಣೆಯಲ್ಲಿ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ.

ಅನಾರೋಗ್ಯದ ಕಾರಣದಿಂದ ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭವಾನಿ ಅವರು ಬಳಿಕ ಮಗಳ ಮನೆಯಲ್ಲಿ ಕೆಲವು ದಿನಗಳ ಕಾಲ ವಾಸವಿದ್ದು, ಮನೆಗೆ ಮರಳಿದಾಗ ಮನೆ ಹಾನಿಗೀಡಾಗಿರುವುದು ಕಂಡುಬಂದಿದೆ. ಇದರಿಂದ ಮನೆ ಬಿಟ್ಟು ಹೋಗಲೂ ಸಾಧ್ಯವಾಗದ, ಹಾನಿಗೀಡಾದ ಮನೆಯಲ್ಲಿ ಉಳಿಯಲೂ ಸಾಧ್ಯವಾಗದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ, ಇದುವರೆಗೆ ಸರ್ಕಾರದ ನೆರವು ಲಭಿಸಿಲ್ಲ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಇನಾಯತ್ ಅಲಿ, “ಭವಾನಿ ಅವರ ಕುಟುಂಬ ಎದುರಿಸುತ್ತಿರುವ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ನೆರವು ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಅಲ್ಲದೆ ಈ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಮುಂದಾಗಿರುವ ಆಕಾಶಭವನ ಶಕ್ತಿ ಫ್ರೆಂಡ್ಸ್ ಸಂಘಟನೆಯ ಕಾರ್ಯಕ್ಕೂ ನನ್ನಿಂದಾದ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ದೀಪಕ್ ಪೂಜಾರಿ, ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರೋಹಿತ್, ಪ್ರಮೀಳಾ ಈಶ್ವರ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Previous Post Next Post