ಮಕ್ಕಳ ಚರ್ಮರೋಗ ಚಿಕಿತ್ಸೆಯಲ್ಲಿ ನೂತನ ಬೆಳವಣಿಗೆಗಳ ಅರಿವು ಅಗತ್ಯ: ಡಾ. ಯು.ಕೆ. ಮೋನು

ಮಂಗಳೂರು, ಜೂನ್ 13: ವೈದ್ಯರು ಮತ್ತು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳು ಹಾಗೂ ತಾಂತ್ರಿಕ ಬೆಳವಣಿಗೆಗಳ ಕುರಿತು ನಿರಂತರವಾಗಿ ಜ್ಞಾನ ವೃದ್ಧಿಸಿಕೊಳ್ಳಬೇಕು. ರೋಗಿಗಳ ನಿರೀಕ್ಷೆಗಳಿಗೆ ಸ್ಪಂದಿಸುವ ಮೂಲಕ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಜನಮನ್ನಣೆ ಗಳಿಸಬೇಕು ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಹೇಳಿದರು.

ಅವರು ಶನಿವಾರ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಡೋಮ್ ಸಭಾಂಗಣದಲ್ಲಿ ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಚರ್ಮರೋಗ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ “ಮಕ್ಕಳಲ್ಲಿ ಕಾಣಿಸುವ ಚರ್ಮರೋಗಗಳು ಮತ್ತು ಚಿಕಿತ್ಸೆಗಳು” ಕುರಿತ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ರೋಗಿಗಳಿಗೆ ನಗುಮುಖದ ಸೇವೆ ನೀಡುವ ಮೂಲಕ ಅವರ ವಿಶ್ವಾಸ ಹಾಗೂ ಪ್ರೀತಿಗೆ ಸ್ಪಂದಿಸಬೇಕು. ಬಡವರ ಸೇವೆಯೇ ದೇವರ ಸೇವೆಗೆ ಸಮಾನವಾಗಿದ್ದು, ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಾಗಾರದಲ್ಲಿ ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿಯ ಸದಸ್ಯ ಡಾ. ಎಂ.ವಿ. ಪ್ರಭು ಮಾತನಾಡಿ, ರಾಜ್ಯದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳಲ್ಲಿ ಕಂಡುಬರುವ ಚರ್ಮರೋಗಗಳ ಕಾರಣಗಳು, ಲಕ್ಷಣಗಳು, ಚಿಕಿತ್ಸಾ ವಿಧಾನಗಳು ಹಾಗೂ ಇತ್ತೀಚಿನ ವೈದ್ಯಕೀಯ ಪ್ರಗತಿ ಮತ್ತು ಆಧುನಿಕ ತಂತ್ರಜ್ಞಾನಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಮಕ್ಕಳ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಶಂಶಾದ್ ಖಾನ್ ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.

ಕಾರ್ಯಾಗಾರದಲ್ಲಿ ಡಾ. ಸ್ಪಂದನಾ ಹೆಗ್ಡೆ, ಡಾ. ಸಹನಾ ಶ್ರೀನಿವಾಸ್, ಡಾ. ನಿಖಿತಾ ಸೋನ್ಸ್, ಡಾ. ಸ್ಮಿತಾ ಪ್ರಭು, ಡಾ. ಸಹನಾ ಶ್ರೀಹರಿ ಹಾಗೂ ಡಾ. ನೂರುಲ್ಲಾ ಅವರು ಮಕ್ಕಳ ಚರ್ಮ ಆರೋಗ್ಯ ಮತ್ತು ರೋಗ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ಒನೀಲ್ ಫರ್ನಾಡಿಸ್ ಸ್ವಾಗತಿಸಿದರು. ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ರುತಕೀರ್ತಿ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ಚೇತನ್ ತಾಂಡೆಲ್ ವಂದಿಸಿದರು. ಡಾ. ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.

ಸುಮಾರು 150ಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳು ಮತ್ತು ವೈದ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Previous Post Next Post