ವಿಟ್ಲ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ವಾಹನವನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಮೇ 18ರ ರಾತ್ರಿ ಬೆಳಕಿಗೆ ಬಂದಿದೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ (ಕಾ&ಸು) ರಾಮಕೃಷ್ಣ ಅವರಿಗೆ ವಿಟ್ಲ ಕುಡ್ತಮುಗೇರು ಭಾಗದ ಹೊಳೆಯಿಂದ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಬೈರಿಕಟ್ಟೆ ಬಳಿ ವಾಹನ ತಡೆದು ಪರಿಶೀಲನೆ ನಡೆಸಲಾಯಿತು.
ಈ ವೇಳೆ ಪಿಕ್‌ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿರುವುದು ಪತ್ತೆಯಾಯಿತು. ವಾಹನ ಚಾಲಕನಾದ ಬಂಟ್ವಾಳ ಕೊಳ್ನಾಡು ನಿವಾಸಿ ರೆನೋಲ್ ಮೆಲ್ರೋಯ್ ಡಿಸೋಜ (31) ಅವರನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಅಥವಾ ದಾಖಲೆಗಳಿಲ್ಲದೆ ಮರಳು ಸಾಗಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ಮರಳಿನ ಸಮೇತ ಪಿಕ್‌ಅಪ್ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2026ರಡಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2), MMDR ಕಾಯ್ದೆ 1957ರ ಕಲಂ 4(1), 4(1A), 21 ಹಾಗೂ ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ಸ್ 1994ರ ಕಲಂ 3 ಮತ್ತು 44ರಡಿ ತನಿಖೆ ಮುಂದುವರಿದಿದೆ.
Tags
ಅಪರಾಧ