ವಿಜಯಪುರ: ಜಿಲ್ಲೆಯ ತಿಕೋಟ ಭಾಗದಲ್ಲಿ ಇಂದು ಮತ್ತೆ ಭೂಕಂಪನದ ಅನುಭವವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಇಂದು ಬೆಳಿಗ್ಗೆ ಸುಮಾರು 11.26ರ ವೇಳೆಗೆ ತಿಕೋಟ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘೋಣಸಗಿ, ಕಳ್ಳವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಟ್ಟಿ ಹಾಗೂ ಮಲಕನ ದೇವರಟ್ಟಿ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿರುವ ಮಾಹಿತಿ ಲಭ್ಯವಾಗಿದೆ.
ಭಾರೀ ಸ್ಫೋಟದಂತಹ ಶಬ್ದ ಕೇಳಿಬಂದ ಬಳಿಕ ಭೂಮಿ ನಡುಗಿದಂತೆ ಅನುಭವವಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಏಕಾಏಕಿ ಉಂಟಾದ ಈ ಕಂಪನದಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ತಿಕೋಟ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಭೂಕಂಪನದ ತೀವ್ರತೆ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
Tags
ವಿಜಯಪುರ