ಮಂಗಳೂರು : ವಿಶ್ವವಿಖ್ಯಾತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಏಳು ದಶಾವತಾರ ಯಕ್ಷಗಾನ ಮೇಳಗಳ ಈ ಸಾಲಿನ ತಿರುಗಾಟ ಅಂತಿಮ ಹಂತ ತಲುಪಿದ್ದು, ಭಕ್ತಿಭಾವದಿಂದ ಕೂಡಿದ ‘ಶ್ರೀದೇವಿ ಮಹಾತ್ಮೆ’ ಪ್ರಸಂಗವು 700ಕ್ಕೂ ಅಧಿಕ ಪ್ರದರ್ಶನಗಳ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಕಳೆದ ನ.17ರಂದು ಆರಂಭವಾದ ಈ ವರ್ಷದ ತಿರುಗಾಟದಲ್ಲಿ, ಮೇ 17ರವರೆಗೆ ಏಳು ಮೇಳಗಳು ಸೇರಿ ಒಟ್ಟು 700 ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಿವೆ. ಮೇ.18ರಿಂದ 25ರವರೆಗೆ ನಡೆಯಲಿರುವ ಇನ್ನೂ 20 ಪ್ರದರ್ಶನಗಳೊಂದಿಗೆ ಒಟ್ಟು ಸಂಖ್ಯೆ 720ಕ್ಕೆ ಏರಲಿದ್ದು, ಇದು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಯಾಗಿದೆ.
ಮೇಳಗಳ ಸಾಧನೆ ಹೀಗಿದೆ :
1ನೇ ಮೇಳ – 113 ಪ್ರದರ್ಶನಗಳೊಂದಿಗೆ ಮೊದಲ ಸ್ಥಾನ
2ನೇ ಮೇಳ – 108 ಪ್ರದರ್ಶನಗಳು
5ನೇ ಮೇಳ – 107 ಪ್ರದರ್ಶನಗಳು
ಹೊಸದಾಗಿ ಆರಂಭವಾದ 7ನೇ ಮೇಳ ಕೂಡ 100 ಪ್ರದರ್ಶನಗಳನ್ನು ಪೂರೈಸಿ ಗಮನಸೆಳೆದಿವೆ.
ಮೇ 26ರಂದು ಸೇವೆಯಾಟ; ತಿರುಗಾಟಕ್ಕೆ ತೆರೆ
189 ದಿನಗಳ ಸುದೀರ್ಘ ತಿರುಗಾಟದ ಸಮಾರೋಪವಾಗಿ ಮೇ 26ರಂದು ಕಟೀಲು ಕ್ಷೇತ್ರದಲ್ಲಿ ಏಳೂ ಮೇಳಗಳ ‘ಸೇವೆಯಾಟ’ ನಡೆಯಲಿದೆ. ಸಂಪ್ರದಾಯದಂತೆ ಗೆಜ್ಜೆ ಬಿಚ್ಚುವ ಕಾರ್ಯಕ್ರಮದೊಂದಿಗೆ ಈ ಸಾಲಿನ ಯಕ್ಷಗಾನ ತಿರುಗಾಟಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ.
ಏಳು ಮೇಳಗಳಿಂದ ಏಕಕಾಲದಲ್ಲಿ ‘ಶ್ರೀದೇವಿ ಮಹಾತ್ಮೆ’ :
ಈ ಸಾಲಿನ ವಿಶೇಷ ಆಕರ್ಷಣೆಯಾಗಿ ಏಪ್ರಿಲ್ 20ರಂದು ಕಟೀಲು ಜಾತ್ರೆಯ ಹಗಲು ರಥೋತ್ಸವ ಹಾಗೂ ಏಪ್ರಿಲ್ 30ರಂದು ಏಳು ಮೇಳಗಳೂ ಒಂದೇ ಸಮಯದಲ್ಲಿ ‘ಶ್ರೀದೇವಿ ಮಹಾತ್ಮೆ’ ಪ್ರಸಂಗವನ್ನು ಪ್ರದರ್ಶಿಸಿ ಭಕ್ತರಲ್ಲಿ ಭಕ್ತಿರಸ ಉಣಬಡಿಸಿದ್ದವು.
ಒಳಾಂಗಣ ಸಭಾಂಗಣಗಳಲ್ಲಿ ಹೆಚ್ಚು ಪ್ರದರ್ಶನ
ಮಳೆಯ ಆತಂಕ ಹಾಗೂ ಭಕ್ತರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಹೆಚ್ಚಿನ ಆಟಗಳನ್ನು ಕಟೀಲಿನ ಸರಸ್ವತೀ ಸದನ ಮತ್ತು ಮಹಾಲಕ್ಷ್ಮೀ ಸದನಗಳಂತಹ ಒಳಾಂಗಣ ಸಭಾಂಗಣಗಳಲ್ಲಿ ಆಯೋಜಿಸಲಾಗಿತ್ತು. ಏಪ್ರಿಲ್ 1ರಿಂದ ಇಂದಿನವರೆಗೆ 100ಕ್ಕೂ ಹೆಚ್ಚು ಪ್ರದರ್ಶನಗಳು ಸಭಾಂಗಣಗಳಲ್ಲೇ ನಡೆದಿರುವುದು ಈ ಸಾಲಿನ ಮತ್ತೊಂದು ವಿಶೇಷತೆಯಾಗಿದೆ.
Tags
ಮಂಗಳೂರು