ಮಂಗಳೂರು: “ರೋಟರಿ ಸಂಸ್ಥೆಯ ಸದಸ್ಯರು ಕ್ರಿಯಾಶೀಲರಾಗಿ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನೂತನ ಸದಸ್ಯರನ್ನು ಸೇರ್ಪಡಿಸುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು” ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ಹಾಗೂ ಮೈಸೂರು ಮೂಲದ ಖ್ಯಾತ ಕೈಗಾರಿಕೋದ್ಯಮಿ ರೋ. ರಾಮಕೃಷ್ಣ ಪಿ.ಕೆ. ಅಭಿಪ್ರಾಯಪಟ್ಟರು.
ನಗರದ ಮಂಗಳೂರು ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆದ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕೃತ ಭೇಟಿ ನೀಡಿ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ರೋಟರಿ ಅಂತರಾಷ್ಟ್ರೀಯ ಪ್ರತಿಷ್ಠಾನಕ್ಕೆ ಉದಾರ ದೇಣಿಗೆ ನೀಡುವಂತೆ ಕರೆ ನೀಡಿದ ಅವರು, ಅಂತರಾಷ್ಟ್ರೀಯ ರೋಟರಿ ಚಳವಳಿಗೆ ಭಾರತೀಯ ರೋಟರಿ ಸಂಸ್ಥೆಗಳ ಕೊಡುಗೆ ಅಪಾರ ಮತ್ತು ಅಮೂಲ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೋ. ರವಿಶಂಕರ್ ರಾವ್, ಪದಾಧಿಕಾರಿಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋ. ಡಾ. ರಂಜನ್ ಸಂಪಾದಕತ್ವದ ಸಂಸ್ಥೆಯ ಗೃಹ ವಾರ್ತಾಪತ್ರಿಕೆ “ಸಿಟಿ ಬಿಟ್ಸ್ ಆಂಡ್ ಬೈಟ್ಸ್” ಅನ್ನು ಬಿಡುಗಡೆಗೊಳಿಸಿ, ಸಂಸ್ಥೆಯ ಸಮಾಜಸೇವಾ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿದರು.
ಸಂಸ್ಥೆಯ ಸ್ಥಾಪನಾ ಸದಸ್ಯರಾದ ರೋ. ಡಾ. ರಂಜನ್, ರೋ. ಸರಿತಾ ಡಿ’ಸೋಜಾ, ರೋ. ಪ್ರಶಾಂತ್ ರೈ, ರೋ. ಬಸವ ಕುಮಾರ್ ಹಾಗೂ ರೋ. ಸುದೇಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ರೋ.ಸಜ್ಞಾ ಭಾಸ್ಕರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ರೋ. ಪದ್ಮನಾಭ್ ನಾಯ್ಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಲಹೆಗಾರ ರೋ. ರಾಜೇಂದ್ರ ಕಲ್ಪಾವಿ ಹಾಗೂ ವಲಯ ಪ್ರತಿನಿಧಿ ರೋ. ಪ್ರಶಾಂತ್ ರೈ ಉಪಸ್ಥಿತರಿದ್ದರು. ರೋ. ಕೆನ್ಯೂಟ್ ಪಿಂಟೋ ಅತಿಥಿಗಳನ್ನು ಪರಿಚಯಿಸಿ ಗೌರವಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ರೋ. ಪದ್ಮನಾಭ್ ನಾಯ್ಕ ವಂದಿಸಿದರು.
Tags
ಮಂಗಳೂರು