ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಮೇ.8ರಿಂದ ಮೂರು ದಿನಗಳ ಗೇರು-ಮಾವು-ಹಲಸು ಮೇಳ; 60ಕ್ಕೂ ಅಧಿಕ ಮಾವಿನ ತಳಿಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ

ಮಂಗಳೂರು: ರೈತ ಕುಡ್ಲ ಪ್ರತಿಷ್ಠಾನ, ಸಿರಿ ತೋಟಗಾರಿಕೆ ಸಂಘ ಮಂಗಳೂರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಸಹಯೋಗದಲ್ಲಿ ಗೇರು-ಮಾವು-ಹಲಸು ಮೇಳವು ಮೇ 8, 9 ಮತ್ತು 10ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.

ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.
ಮೇಳದಲ್ಲಿ ಸಕ್ಕರೆ ಮತ್ತು ನೀರು ಬೆರೆಸದ ತಾಜಾ ಗೇರು ಹಣ್ಣಿನ ಜ್ಯೂಸ್, ಗೇರು ಹಣ್ಣಿನ ಬೆಲ್ಲ, ಐಸ್ ಕ್ರೀಂ, ಉಪ್ಪಿನಕಾಯಿ, ಬರ್ಫಿ, ಕ್ಯಾಶ್ಯು ಆಪಲ್ ಮಫಿನ್ಸ್, ಸ್ವಾಶ್, ಹಲ್ವ, ಶೀರಾ, ಪಾಯಸ, ಗೇರು ಬೀಜದ ಮೊಳಕೆ, ಬಿಸ್ಕತ್ತು, ಸುಕಾಜು ಸೇರಿದಂತೆ ಹಲವಾರು ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. 

ನಗರ ಪ್ರದೇಶದಲ್ಲಿಯೂ ಬೆಳೆಸಬಹುದಾದ ಗೇರು ಸಸಿಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.
ಗೇರು ಹಣ್ಣಿನ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಈ ಮೇಳ ಆಯೋಜಿಸಲಾಗುತ್ತಿದೆ. ಗೇರು ಹಣ್ಣಿನ ಮೌಲ್ಯವರ್ಧನೆಗೆ ಉತ್ತೇಜನ ನೀಡುವುದೂ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇದೇ ವೇಳೆ 60ಕ್ಕೂ ಅಧಿಕ ಬಗೆಯ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ರಾಮನಗರ, ಅಂಕೋಲ, ಕೋಲಾರ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಭಾಗವಹಿಸಿ ನೇರ ಮಾರಾಟ ನಡೆಸಲಿದ್ದಾರೆ. ವಿವಿಧ ತಳಿಯ ಹಲಸಿನ ಹಣ್ಣುಗಳ ಮಾರಾಟವೂ ಇರಲಿದೆ.

ಮೇ 8ರಂದು ಬೆಳಗ್ಗೆ 11 ಗಂಟೆಗೆ ಅಡಿಕೆ ಪತ್ರಿಕೆ ಸಂಪಾದಕ ಹಾಗೂ ಗೇರು ಹಣ್ಣು ಮೌಲ್ಯವರ್ಧನೆಯ ರೂವಾರಿ ಶ್ರೀ ಪಡ್ರೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಡಾ. ಭಾರತಿ ನಿರ್ಮಲ್, ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸದಸ್ಯರಾದ ಜಗನ್ನಾಥ ಗಾಂಭೀರ್, ಜಿ.ಕೆ. ಭಟ್, ರಾಮ ಮೊಗರೋಡಿ, ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಹಾಗೂ ಕಾರ್ಯದರ್ಶಿ ಲತೀಶ್ ಉಪಸ್ಥಿತರಿರುವರು.
Previous Post Next Post