ಮಡಿಕೇರಿ : ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ; 20 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಭೀಕರ ಘಟನೆ ಸಂಭವಿಸಿದ್ದು, ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಬೆಂಗಳೂರು ಮೂಲದ ಶಿವಕುಮಾರ್ (50) ಮೃತ ಚಾಲಕ. ಅವರು ಚಲಾಯಿಸುತ್ತಿದ್ದ ಬಸ್ ಇಂದು ಮುಂಜಾನೆ ಸುಮಾರು 4:45ರ ವೇಳೆಗೆ ಮಡಿಕೇರಿಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿತ್ತು. ತಾಳತ್ತಮನೆ ಬಳಿ ತಲುಪುತ್ತಿದ್ದಂತೆಯೇ ಶಿವಕುಮಾರ್ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ.

ಇದರಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದರೆಗೆ ಢಿಕ್ಕಿ ಹೊಡೆದು ವಾಲಿ ನಿಂತಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಹೃದಯಾಘಾತಕ್ಕೊಳಗಾದ ಶಿವಕುಮಾರ್ ಅವರು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Post a Comment

Previous Post Next Post