ಮೇರಿಹಿಲ್‌ನಲ್ಲಿ ಅಕ್ರಮ ಗಾಂಜಾ ಸಾಗಾಟ, ಮಾರಾಟಕ್ಕೆ ಯತ್ನ ; 3 ಕೆಜಿ ಗಾಂಜಾ ಸಹಿತ ಆರೋಪಿಯ ಬಂಧನ

ಮಂಗಳೂರು:  ಗಾಂಜಾವನ್ನು ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳೂರು ನಗರದ ಕಾವೂರು ಪೊಲೀಸರು ಬಂಧಿಸಿ, ಸುಮಾರು ₹1.56 ಲಕ್ಷ ಮೌಲ್ಯದ 3 ಕೆಜಿ 138 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮೇ 13ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಬಳಿ ಮೇರಿಹಿಲ್ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಎಡಬದಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತ ಆರೋಪಿಯನ್ನು ಉಳ್ಳಾಲ ತಾಲೂಕಿನ ಮುಕ್ಕಚೇರಿ ಹಿಲರಿಯ ನಗರದ ನಿವಾಸಿ ಇರ್ಷಾದ್ @ ಇರ್ಷಾ (26) ಎಂದು ಗುರುತಿಸಲಾಗಿದೆ.

ಆರೋಪಿಯ ಬಳಿ ಇದ್ದ ಸುಮಾರು 3 ಕೆಜಿ 138 ಗ್ರಾಂ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್, ಸ್ಕೂಟರ್ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 74/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(B) ಅಡಿ ಪ್ರಕರಣ ದಾಖಲಾಗಿದ್ದು, ಪಣಂಬೂರು ಎಸಿಪಿ ತಂಡ ಹಾಗೂ ಕಾವೂರು ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆರೋಪಿಯ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ Arms Act ಪ್ರಕರಣ ಸೇರಿದಂತೆ, ಮಂಗಳೂರು ಸಿಎಸ್ಪಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣವೂ ದಾಖಲಾಗಿತ್ತು.
Previous Post Next Post