ಕೈಗಳಿಲ್ಲ… ಕನಸುಗಳಿಗೆ ಕೊನೆಯಿಲ್ಲ! ಕಾಲಿನಿಂದ ವಿವೇಕಾನಂದರ ಅದ್ಭುತ ಚಿತ್ರ ರಚಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಂಟ್ವಾಳದ ಕೌಶಿಕ್ ಆಚಾರ್ಯ!

ಬಂಟ್ವಾಳ: ಕೈಗಳಿಲ್ಲದಿದ್ದರೂ ಕನಸುಗಳಿಗೆ ರೆಕ್ಕೆ ಕಟ್ಟಿ ಸಾಧನೆಯ ಹೊಸ ಇತಿಹಾಸ ನಿರ್ಮಿಸಿರುವ ಯುವಕ ಕೌಶಿಕ್ ಆಚಾರ್ಯ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಬಂಟ್ವಾಳ ತಾಲೂಕಿನ ಕಂಚಿಕಾರಪೇಟೆ ಬಸ್ತಿಪಡ್ಡುವಿನ ಈ ಪ್ರತಿಭಾವಂತ ಯುವಕ, ಕೇವಲ 3 ನಿಮಿಷ 40 ಸೆಕೆಂಡುಗಳಲ್ಲಿ ಕಾಲಿನ ಸಹಾಯದಿಂದ ಗೂ ಮತ್ತು ಅರಿಶಿನ ಪುಡಿಯನ್ನು ಬಳಸಿ ಸ್ವಾಮಿ ವಿವೇಕಾನಂದರ ತಲೆಕೆಳಗಿನ ಚಿತ್ರವನ್ನು ರಚಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.

ದಹುಟ್ಟಿನಿಂದಲೇ ಕೈಗಳು ಸರಿಯಾಗಿ ಬೆಳೆಯದಿದ್ದರೂ, ಅದನ್ನು ದೌರ್ಬಲ್ಯವೆಂದು ಪರಿಗಣಿಸದೇ “ನಾನು ಯಾರಿಗೂ ಹೊರೆಯಾಗಬಾರದು” ಎಂಬ ಆತ್ಮವಿಶ್ವಾಸದೊಂದಿಗೆ ಬದುಕನ್ನು ಎದುರಿಸುತ್ತಿರುವ ಕೌಶಿಕ್, ತಮ್ಮ ಎಲ್ಲಾ ಕೆಲಸಗಳನ್ನು ಕಾಲಿನ ನೆರವಿನಿಂದಲೇ ನಿರ್ವಹಿಸುತ್ತಿದ್ದಾರೆ. ಅವರ ಈ ಸಾಧನೆಗೆ ತಾಯಿ-ತಂದೆ ಹಾಗೂ ಅಣ್ಣನ ನಿರಂತರ ಪ್ರೋತ್ಸಾಹವೇ ದೊಡ್ಡ ಬೆಂಬಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೌಶಿಕ್ ಅವರ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವ ವಹಿಸಿಕೊಂಡಿದ್ದು, ಸಂಸ್ಥೆ ಅವರ ಪ್ರತಿಭೆ ಬೆಳೆಸಲು ಸದಾ ಬೆಂಬಲ ನೀಡುತ್ತಿದೆ. ಈ ಅಪೂರ್ವ ದಾಖಲೆಯ ಸಾಧನೆಗೆ ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಅವರ ಪ್ರೋತ್ಸಾಹವೂ ಪ್ರಮುಖ ಕಾರಣವಾಗಿದೆ ಎಂದು ಕೌಶಿಕ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಚಿತ್ರಕಲೆಯ ಮೇಲಿನ ಅಪಾರ ಆಸಕ್ತಿಯಿಂದ ಕಾಲಿನ ಸಹಾಯದಿಂದಲೇ ವಿವಿಧ ಕಲಾವಿದರು, ಸಮಾಜಸೇವಕರು ಹಾಗೂ ಗಣ್ಯರ ಚಿತ್ರಗಳನ್ನು ಬಿಡಿಸುವ ಕೌಶಿಕ್, ಅವುಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ. ಅನೇಕ ವೇದಿಕೆಗಳಲ್ಲಿ ಸನ್ಮಾನಕ್ಕೂ ಪಾತ್ರರಾಗಿದ್ದಾರೆ.
ಚಿತ್ರಕಲೆಯ ಜೊತೆಗೆ ನೃತ್ಯ, ಈಜು ಹಾಗೂ ನಟನೆಯಲ್ಲಿಯೂ ಆಸಕ್ತಿ ಹೊಂದಿರುವ ಕೌಶಿಕ್ ಅವರ ಸಾಧನಾ ಪಯಣದಲ್ಲಿ ತಾಯಿಯೇ ಪ್ರಮುಖ ಪ್ರೇರಣೆಯಾಗಿದ್ದು, ಅವಳ ಬೆಂಬಲವೇ ತಮ್ಮ ಬದುಕಿನ ಶಕ್ತಿಯಾಗಿದೆ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

Post a Comment

Previous Post Next Post