ಫರಂಗಿಪೇಟೆ ಹತ್ತನೇ ಮೈಲ್‌ಕಲ್ಲು ಸಮೀಪದ ನೇತ್ರಾವತಿ ನದಿ ತೀರದಲ್ಲಿ ಪುದು ಗ್ರಾಮದ ನಿವಾಸಿಗಳ ವಿಳಾಸ ಹೊಂದಿರುವ ಆಧಾರ್ ಕಾರ್ಡ್‌ಗಳು ರಾಶಿ ರಾಶಿಯಾಗಿ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರು ನದಿಯಲ್ಲಿ ತೇಲಿ ಬರುತ್ತಿದ್ದ ಆಧಾರ್ ಕಾರ್ಡ್‌ಗಳನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಲವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಪುದು ಗ್ರಾಮದ ಅನೇಕ ಮನೆಗಳ ವಿಳಾಸ ಹೊಂದಿರುವ ಕಾರ್ಡ್‌ಗಳು ನದಿ ಬದಿಯಲ್ಲಿ ಚದುರಿಕೊಂಡಿರುವುದು ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ಗ್ರಾಮಸ್ಥರಿಗೆ ಆಧಾರ್ ಕಾರ್ಡ್‌ಗಳು ತಲುಪದೆ ಸಾರ್ವಜನಿಕರು ಹಣ ನೀಡಿ ಸೈಬರ್ ಕೇಂದ್ರಗಳಿಂದ ಪ್ರತಿಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಾವಿರಾರು ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿರುವುದು ಗಂಭೀರ ವಿಷಯವಾಗಿದ್ದು, ಇದರ ಹಿಂದೆ ಯಾರು ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಸ್ಥಳೀಯ ಶಾಸಕರಿಗೂ ಗ್ರಾಮ ಪಂಚಾಯಿತಿ ವತಿಯಿಂದ ದೂರು ಸಲ್ಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಅಂಚೆ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.
ಈ ಘಟನೆ ಕುರಿತು ಸಂಬಂಧಪಟ್ಟ ಇಲಾಖೆ ತಕ್ಷಣ ತನಿಖೆ ಆರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದೇ ವೇಳೆ, ಈ ರೀತಿಯಾಗಿ ಇಷ್ಟೊಂದು ಪ್ರಮಾಣದಲ್ಲಿ ಆಧಾರ್ ಕಾರ್ಡ್‌ಗಳು ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು ಹಾಗೂ ಇದಕ್ಕೆ ಕಾರಣರಾದವರು ಯಾರು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಜೊತೆಗೆ ತಮ್ಮ ಇಲಾಖೆಯ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
Post a Comment