ಮಂಗಳೂರು: ನಗರದ ಅತ್ತಾವರದಲ್ಲಿರುವ ಅಪಾರ್ಟ್‌ಮೆಂಟ್ ಒಂದರ 12ನೇ ಮಹಡಿಯಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತರ ವಿವರ:
ಮೃತ ವಿದ್ಯಾರ್ಥಿಯನ್ನು ಉತ್ತರ ಭಾರತ ಮೂಲದ ಸಾರ್ಥಕ್ ಮೌರ್ಯ (23) ಎಂದು ಗುರುತಿಸಲಾಗಿದೆ. ಈತ ನಗರದ ಪ್ರತಿಷ್ಠಿತ ಕೆಎಂಸಿ (KMC) ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಘಟನೆಯ ವಿವರ:
ಅತ್ತಾವರದ ಪಿಜಿಯೊಂದರಲ್ಲಿ ವಾಸವಿದ್ದ ಸಾರ್ಥಕ್, ಸೋಮವಾರ ಸಂಜೆ ಅದೇ ಪ್ರದೇಶದಲ್ಲಿರುವ ತನ್ನ ಗೆಳತಿಯಿದ್ದ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದ ಎನ್ನಲಾಗಿದೆ. ಅಲ್ಲಿಂದ ನೇರವಾಗಿ 12ನೇ ಮಹಡಿಗೆ ತೆರಳಿದ ಆತ, ಅಲ್ಲಿಂದ ಕೆಳಕ್ಕೆ ಹಾರಿದ್ದಾನೆ. ಅತೀ ಎತ್ತರದಿಂದ ಬಿದ್ದ ಪರಿಣಾಮ ದೇಹ ಜರ್ಝರಿತಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ತನಿಖೆ ಪ್ರಗತಿಯಲ್ಲಿ:
ಮೃತ ವಿದ್ಯಾರ್ಥಿಗೆ ಮಾರ್ಚ್ 31ರಿಂದ ಪರೀಕ್ಷೆಗಳು ಆರಂಭವಾಗಲಿತ್ತು ಎಂದು ತಿಳಿದುಬಂದಿದೆ. "ಪರೀಕ್ಷಾ ಭಯ" ಅಥವಾ "ಪ್ರೇಮ ವೈಫಲ್ಯ"ದ ಕಾರಣದಿಂದ ಈ ಕೃತ್ಯ ಎಸಗಿರಬಹುದೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.