ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಗೆ, ಏಪ್ರಿಲ್ 10ಕ್ಕೆ ಶಿಕ್ಷೆ ಪ್ರಕಟ

ಕಳೆದ ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ್ದ ಭೀಕರ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಮೊಹಮ್ಮದ್ ಶಾರೀಕ್ ನ್ಯಾಯಾಲಯದ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಐಇಡಿ ಅಳವಡಿಸಿದ್ದ ಪ್ರೆಶರ್ ಕುಕ್ಕರ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಮೊಗ್ಗ ಮೂಲದ ಶಾರೀಕ್, ಚಿಕಿತ್ಸೆಯ ನಂತರ ಎನ್‌ಐಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದನು.

​ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಈತ, ಕಳೆದ ಡಿಸೆಂಬರ್‌ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 229ರ ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಸಿದ್ದನು. ತಾನು ಕುಕ್ಕರ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿರುವುದು ನಿಜವೆಂದು ಒಪ್ಪಿಕೊಂಡಿರುವ ಆತ, ಕೃತ್ಯದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ ಹಾಗೂ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾನೆ. 

ಸುಮಾರು ಮೂರು ತಿಂಗಳ ಸುದೀರ್ಘ ವಿಚಾರಣೆಯ ನಂತರ ಎನ್‌ಐಎ ವಿಶೇಷ ನ್ಯಾಯಾಲಯವು ಕಳೆದ ಮಾರ್ಚ್ 26ರಂದು ಈ ಅರ್ಜಿಯನ್ನು ಅಧಿಕೃತವಾಗಿ ಮಾನ್ಯ ಮಾಡಿದೆ.
​ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ನಡೆಸಿದ್ದು, ಆರೋಪಿಯ ಹೇಳಿಕೆ ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ನ್ಯಾಯಾಲಯವು ವಿಚಾರಣೆ ಪೂರ್ಣಗೊಳಿಸಿದೆ. ತಪ್ಪೊಪ್ಪಿಗೆ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯವು ಇದೇ ಏಪ್ರಿಲ್ 10ರಂದು ಆರೋಪಿಗೆ ಶಿಕ್ಷೆ ಪ್ರಮಾಣದ ಅಂತಿಮ ತೀರ್ಪನ್ನು ಪ್ರಕಟಿಸಲಿದೆ.
Previous Post Next Post