Top News

ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ರೌಡಿಶೀಟರ್ ಆರೀಫ್ ಹುಸೇನ್ ಹತ್ಯೆ: ಕಾರಿನಲ್ಲಿ ಬಂದ ತಂಡದಿಂದ ಮಾರಕ ದಾಳಿ

ಮಂಗಳೂರು ಸಮೀಪದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ನಸುಕಿನ ಜಾವ ನಡೆದ ದಾಳಿಯಲ್ಲಿ ರೌಡಿಶೀಟರ್ ಒಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (42), ಯಾನೆ ‘ಟ್ಯಾಬ್ಲೆಟ್ ಆರೀಫ್’, ಹತ್ಯೆಯಾದ ವ್ಯಕ್ತಿ.


ಮೃತ ಆರೀಫ್ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿ ದಾಖಲಾಗಿದ್ದನು. ಆತ ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದನು. ಶನಿವಾರ ಬೆಳಿಗ್ಗೆ ಬುಲೆಟ್ ಬೈಕ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಮೇಲ್ಭಾಗದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. 

ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆರೀಫ್‌ನನ್ನು ಕೊಲೆ ಮಾಡಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ 2022ರ ಮೇ ತಿಂಗಳಲ್ಲಿ ಕೂಡ ಇದೇ ರೀತಿಯಲ್ಲಿ ಬಜಾಲ್ ಪ್ರದೇಶದಲ್ಲಿ ಟೊಪ್ಪಿ ನೌಫಾಲ್ ಮತ್ತು ಅವನ ತಂಡ ಆರೀಫ್ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿತ್ತು ಎನ್ನಲಾಗಿದೆ.
ಮೂಲತಃ ಕುದ್ರೋಳಿ ನಿವಾಸಿಯಾಗಿದ್ದ ಆರೀಫ್ ಕಳೆದ ಕೆಲವು ವರ್ಷಗಳಿಂದ ಕುಟುಂಬ ಸಮೇತ ಅಜ್ಜಿನಡ್ಕ ಸಮೀಪದ ಮುಳ್ಳುಗುಡ್ಡೆಯಲ್ಲಿ ವಾಸವಾಗಿದ್ದನು. ಘಟನೆ ಸ್ಥಳಕ್ಕೆ ಡಿಸಿಪಿ ಮಿಥುನ್ ಹಾಗೂ ಫೊರೆನ್ಸಿಕ್ (ಸೋಕೋ) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮೃತನು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾನೆ.

Post a Comment

Previous Post Next Post