ಉಳ್ಳಾಲ: ಪಂಚಾಯತ್ ನಿರ್ಮಿಸಿದ್ದ ಮಳೆ ನೀರಿನ ತೋಡನ್ನು ಮುಚ್ಚಿದ ವಿಚಾರವನ್ನು ಪ್ರಶ್ನಿಸಿದ ನೆರೆಮನೆಯವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಪ್ರದೇಶದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಟ್ನಮೊಗರು ನಿವಾಸಿ ನಾಗೇಶ್ ಶೇಣವ ಹಲ್ಲೆ ನಡೆಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ನೆರೆಮನೆಯ ಬೇಬಿ (56), ಅವರ ಪುತ್ರ ರವಿರಾಜ್ ಹಾಗೂ ಸೊಸೆ ವರ್ಷಾ ಹಲ್ಲೆಗೊಳಗಾದವರು.
ಭಾನುವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ನಾಗೇಶ್ ಶೇಣವ ತನ್ನ ಅಂಗಳದ ಮೂಲಕ ಹಲವು ವರ್ಷಗಳಿಂದ ಹರಿದು ಹೋಗುತ್ತಿದ್ದ ಪಂಚಾಯತ್ ನಿರ್ಮಿತ ಮಳೆ ನೀರಿನ ತೋಡಿನ ಛೇಂಬರ್ ಅನ್ನು ಅಗೆದು, ಇಟ್ಟಿಗೆಯಿಂದ ಸಂಪೂರ್ಣವಾಗಿ ಮುಚ್ಚಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ರವಿರಾಜ್ ಮೇಲೆ ಮೊದಲಿಗೆ ಕೆನ್ನೆಗೆ ಹೊಡೆದು ಹಲ್ಲೆ ನಡೆಸಲಾಗಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಬೇಬಿ ಅವರ ಕಾಲಿಗೆ ಕಲ್ಲು ಎಸೆದು ಗಂಭೀರವಾಗಿ ಗಾಯಗೊಳಿಸಲಾಗಿದೆ. ನಂತರ ವಿಷಯವನ್ನು ಪ್ರಶ್ನಿಸಿದ ವರ್ಷಾ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Post a Comment