ಮಂಗಳೂರು, ಫೆ. 28: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಜ್ಞಾನ, ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 20ನೇ ವಾರ್ಷಿಕ ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ ಫೆಬ್ರವರಿ 27ರಂದು ನಗರದ ಬಿಜೈ ಓಷನ್ ಪಾರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಮೈಸೂರು ವಿಜಯನಗರವನ್ನು ಪ್ರತಿನಿಧಿಸಿದ ರೋ. ಹೆಚ್.ಎಂ. ಹರೀಶ್ ಪ್ರಥಮ ಸ್ಥಾನ ಪಡೆದು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ರೋಟರಿ ಕ್ಲಬ್ ಮಂಗಳೂರು ಸಿಟಿ ಪರ ಸ್ಪರ್ಧಿಸಿದ ರೋ. ಡಾ. ರಂಜನ್ ಹಾಗೂ ರೋ. ಸುಮಿತ್ ರಾವ್ ತಂಡ ದ್ವಿತೀಯ ಸ್ಥಾನ ಗಳಿಸಿತು. ರೋಟರಿ ಮಂಗಳೂರು ಕೋಸ್ಟಲ್ ತಂಡದ ರೋ. ಸುಬೋದ್ ಕುಮಾರ್ ದಾಸ್ ಮತ್ತು ರೋ. ಕಿರಣ್ ಪ್ರಸಾದ್ ರೈ ತೃತೀಯ ಸ್ಥಾನ ಪಡೆದರು.
ರೋಟರಿ ಸಂಸ್ಥೆಯ ಆಡಳಿತ ಹಾಗೂ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನೊಳಗೊಂಡ ಈ ಸ್ಪರ್ಧೆ ಕುತೂಹಲಕಾರಿ ಹಾಗೂ ರೋಮಾಂಚನಕಾರಿ ಆಗಿತ್ತು.
ಮೈಸೂರು ಮೂಲದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಾಜಿ ರೋಟರಿ ಜಿಲ್ಲಾ ಗವರ್ನರ್ ರೋ. ಹೆಚ್.ಆರ್. ಕೇಶವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸ್ಪರ್ಧೆಯ ನಿರೂಪಕರಾದ ರೋ. ಡಾ. ದೇವದಾಸ್ ರೈ ಅವರು ರೋಟರಿ ಚಳವಳಿಗೆ ನೀಡಿದ ಸೇವೆ ಅಮೂಲ್ಯವಾದದ್ದು ಎಂದು ಶ್ಲಾಘಿಸಿದರು.
ಬಳಿಕ ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ಹಾಗೂ ರೂ.3,000 ನಗದು ಬಹುಮಾನ ವಿತರಿಸಲಾಯಿತು.
ವಲಯ ಸಹಾಯಕ ಗವರ್ನರ್ ರೋ. ಚಿನ್ನಗಿರಿ ಗೌಡ ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆ “ಸೆಂಟೋರ್” ಅನ್ನು ಬಿಡುಗಡೆಗೊಳಿಸಿದರು. ಕ್ಲಬ್ ಅಧ್ಯಕ್ಷ ರೋ. ಬಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಲಯ ಪ್ರತಿನಿಧಿ ರೋ. ರವಿ ಜಲಾನ್ ಹಾಗೂ ನಿಯೋಜಿತ ಅಧ್ಯಕ್ಷ ರೋ. ರವೀಂದ್ರ ಬಿ.ಎನ್. ಉಪಸ್ಥಿತರಿದ್ದರು.
ಮೈಸೂರು, ಕೊಳ್ಳೆಗಾಲ, ಎಲಂದೂರು, ಮಂಗಳೂರು, ಸುರತ್ಕಲ್, ಪುತ್ತೂರು, ದೇರಳಕಟ್ಟೆ ಹಾಗೂ ಸಿದ್ದಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಒಟ್ಟು 14 ತಂಡಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಕಾರ್ಯದರ್ಶಿ ರೋ. ವಿಕಾಸ್ ಕೋಟ್ಯಾನ್ ಮಾಸಿಕ ವರದಿ ಮಂಡಿಸಿದ್ದು, ಮಾಜಿ ಅಧ್ಯಕ್ಷ ರೋ. ಸಾಯಿಬಾಬಾ ರಾವ್ ವಂದಿಸಿದರು.
Post a Comment