Top News

ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತ ಎಂದ ಟ್ರಂಪ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ ಉಂಟಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯ ಬಳಿಕ ಟೆಹ್ರಾನ್ ನಗರದ ಕೆಲವು ಪ್ರದೇಶಗಳಲ್ಲಿ ಹರ್ಷೋದ್ಗಾರಗಳು ಕೇಳಿಬಂದಿರುವುದಾಗಿ ವರದಿಯಾಗಿದೆ.

ಇಸ್ರೇಲ್‌ನ ಹಿರಿಯ ಅಧಿಕಾರಿಯೊಬ್ಬರು ಖಮೇನಿ ಅವರ ಮೃತದೇಹದ ಅವಶೇಷಗಳು ದಾಳಿಯ ಬಳಿಕ ಪತ್ತೆಯಾಗಿವೆ ಎಂದು ತಿಳಿಸಿರುವುದಾಗಿ ವರದಿಗಳು ಹೇಳಿವೆ. ಜೆರುಸಲೆಮ್ ಪೋಸ್ಟ್ ವರದಿ ಪ್ರಕಾರ, ಟೆಹ್ರಾನ್ ಮೇಲೆ ನಡೆದ ವೈಮಾನಿಕ ದಾಳಿಯ ಅವಶೇಷಗಳಡಿ ಖಮೇನಿ ಅವರ ದೇಹ ಪತ್ತೆಯಾಗಿದೆ ಎನ್ನಲಾಗಿದೆ. ಈ ಸಂಬಂಧದ ದಾಖಲೆಗಳನ್ನು ಪ್ರಧಾನಿ ನೆತನ್ಯಾಹು ಅವರಿಗೆ ತೋರಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

1989ರಲ್ಲಿ ಇರಾನ್ ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ನಿಧನದ ಬಳಿಕ ಅಲಿ ಖಮೇನಿ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. 1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಶಾ ಮೊಹಮ್ಮದ್ ರೆಜಾ ಪಹ್ಲವಿ ಆಡಳಿತವನ್ನು ಕೆಡವಿದ ಚಳುವಳಿಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

86 ವರ್ಷದ ಖಮೇನಿ ಇರಾನ್‌ನ ಕಮಾಂಡರ್-ಇನ್-ಚೀಫ್ ಆಗಿದ್ದು, ದೇಶದ ರಾಜಕೀಯ, ಸೈನಿಕ ಹಾಗೂ ಧಾರ್ಮಿಕ ನೀತಿಗಳಲ್ಲಿ ಅಂತಿಮ ನಿರ್ಧಾರಾಧಿಕಾರ ಹೊಂದಿದ್ದರು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಪಡೆ ನೇರವಾಗಿ ಅವರ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಿತ್ತು.

ಇದರ ಮಧ್ಯೆ, ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 201 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ರೆಡ್ ಕ್ರೆಸೆಂಟ್ ಮಾಹಿತಿಯನ್ನು ಉಲ್ಲೇಖಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಹಾಗೂ ಅಮೆರಿಕದ ಸೈನಿಕ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

Post a Comment

Previous Post Next Post