Top News

ಮಂಗಳೂರಿನಲ್ಲಿ ಮಕ್ಕಳ ಅಪಹರಣ ವದಂತಿ: ಯಾವುದೇ ಪ್ರಕರಣ ದಾಖಲಾಗಿಲ್ಲ – ಪೊಲೀಸ್ ಕಮಿಷನರ್ ಸ್ಪಷ್ಟನೆ

ಮಂಗಳೂರು: ನಗರದ ಕುಂಟಿಕಾನ ಪರಿಸರದಲ್ಲಿ ಶಾಲಾ ಮಕ್ಕಳ ಅಪಹರಣ ನಡೆಯುತ್ತಿದೆ ಎಂಬ ಆಧಾರರಹಿತ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಧ್ವನಿ ಸಂದೇಶದ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿದ್ದು, ಮಂಗಳೂರು ನಗರದ ಯಾವುದೇ ಭಾಗದಲ್ಲಿ ಮಕ್ಕಳ ನಾಪತ್ತೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ತನಿಖೆ ವೇಳೆ ವಾಯ್ಸ್ ಮೆಸೇಜ್ ಹರಿಬಿಟ್ಟಿದ್ದ ಮಹಿಳೆಯನ್ನು ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಕೆ, ರಸ್ತೆಯಲ್ಲಿ ಕೆಲವು ವಿದ್ಯಾರ್ಥಿಗಳು ಮಾತನಾಡಿಕೊಳ್ಳುತ್ತಿದ್ದ ವಿಷಯವನ್ನು ಕೇಳಿ ಅದರ ಆಧಾರದ ಮೇಲೆ ಆಡಿಯೋ ಸಂದೇಶವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆಕೆ ಪ್ರತ್ಯಕ್ಷ ಸಾಕ್ಷಿಯಾಗಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಇಂತಹ ಸುಳ್ಳು ಹಾಗೂ ಆಧಾರರಹಿತ ಸಂದೇಶಗಳನ್ನು ಹಂಚುವುದರಿಂದ ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಉಂಟಾಗುತ್ತದೆ. ಕಿಡ್ನಾಪ್ ಹೆಸರಿನಲ್ಲಿ ನಕಲಿ ಸುದ್ದಿಗಳನ್ನು ಶೇರ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಪೋಷಕರು ಹಾಗೂ ಸಾರ್ವಜನಿಕರು ಗಾಬರಿಯಾಗದೆ, ಯಾವುದೇ ಸಂದೇಹಾಸ್ಪದ ಮಾಹಿತಿ ದೊರೆತಲ್ಲಿ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

Post a Comment

Previous Post Next Post