ದೆಹಲಿ ಕಾರು ಸ್ಫೋಟ ನಡೆಸಿದ್ದು ಕಾಶ್ಮೀರ ಮೂಲದ ಡಾ.ಉಮರ್ ಉನ್ ನಬಿ ; ಡಿಎನ್ಏ ಪರೀಕ್ಷೆಯಿಂದ ದೃಢ

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ವಿನಾಶಕಾರಿ ಕಾರು ಸ್ಫೋಟವನ್ನು ಕಾಶ್ಮೀರ ಮೂಲದ ವೈದ್ಯಕೀಯ ವೃತ್ತಿಪರ ಡಾ. ಉಮರ್ ಉನ್ ನಬಿ ನಡೆಸಿದ್ದಾನೆ ಎಂಬುದನ್ನು ಡಿಎನ್‌ಎ ಪರೀಕ್ಷೆಯು ದೃಢಪಡಿಸಿದೆ.

ನವೆಂಬರ್ 10ರಂದು ಐತಿಹಾಸಿಕ ಸ್ಮಾರಕದ ಕೆಂಪು ಕೋಟೆಯ ಹೊರಗಿನ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಸಮೀಪದ ಅಂಗಡಿ-ಮುಗಟ್ಟುಗಳು ಹಾನಿಗೊಳಗಾದವು ಮತ್ತು ಹಳೆಯ ದೆಹಲಿಯ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು.

ಬಾಂಬ್ ದಾಳಿಯಲ್ಲಿ ಬಳಸಲಾದ ಬಿಳಿ ಹುಂಡೈ ಐ20 ಕಾರು ಸ್ಫೋಟಕ್ಕೂ ಕೇವಲ 11 ದಿನಗಳ ಮೊದಲು ಡಾ. ಉಮರ್ ಖರೀದಿಸಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿನ ಅವರ ಕುಟುಂಬದಿಂದ ತೆಗೆದುಕೊಳ್ಳಲಾದ ಡಿಎನ್‌ಎ ಮಾದರಿಗಳನ್ನು ಕಾರಿನಿಂದ ವಶಪಡಿಸಿಕೊಳ್ಳಲಾದ ಮಾನವ ಅವಶೇಷಗಳೊಂದಿಗೆ ಹೋಲಿಸಲಾಗಿದ್ದು, ಸ್ಫೋಟದ ಸಮಯದಲ್ಲಿ ಡಾ. ಉಮರ್ ಕಾರನ್ನು ಚಲಾಯಿಸುತ್ತಿದ್ದನೆಂಬುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಕೇಂದ್ರ ಭದ್ರತಾ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಬಳಿಕ, ಕೇಂದ್ರ ಸರ್ಕಾರ ಈ ಸ್ಫೋಟವನ್ನು ಭಯೋತ್ಪಾದಕರ ಹೇಯ ಕೃತ್ಯವೆಂದು ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, “ನವೆಂಬರ್ 10ರಂದು ನಡೆದ ದೆಹಲಿ ಕಾರು ಸ್ಫೋಟ ಉಗ್ರರ ಹೇಯ ಕೃತ್ಯವಾಗಿದೆ. ಈ ರೀತಿಯ ಘಟನೆಗಳು ದೇಶದ ಶಾಂತಿ ಮತ್ತು ಭದ್ರತೆಗೆ ಸವಾಲು ಎಸೆದಂತಿವೆ,” ಎಂದು ಹೇಳಿದ್ದಾರೆ. 

Post a Comment

Previous Post Next Post