ಮಂಗಳೂರು : “ತುಳು ಭಾಷೆಯಲ್ಲಿ ಅಪಾರವಾದ ಸಾಹಿತ್ಯ ಸಂಪತ್ತು ಅಡಗಿದೆ. ಈ ಕೃತಿಗಳ ಪರಿಚಯ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡುವ ಮೂಲಕ ಅಕಾಡೆಮಿ ಓದುವ ಹವ್ಯಾಸಕ್ಕೆ ಪ್ರೇರಣೆಯಾಗುತ್ತಿದೆ,” ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಸಂತ್ ಕಾರಂದೂರು ಮಾತನಾಡಿ, “ಅಕಾಡೆಮಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದರು.
ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, “ತುಳು ಬದುಕನ್ನು ಅರಿಯಲು ತುಳು ಪುಸ್ತಕಗಳ ಓದು ಅತ್ಯಗತ್ಯ. ತುಳುವೇತರರೂ ತುಳು ನೆಲದ ಸೊಗಡು ಅರಿಯಲು ಕನ್ನಡ, ಇಂಗ್ಲೀಷ್, ಮಲಯಾಳಂ, ಹಿಂದಿ ಸೇರಿದಂತೆ ಹಲಭಾಷೆಗಳಲ್ಲಿ ತುಳು ಕುರಿತು ಪುಸ್ತಕಗಳು ಅಕಾಡೆಮಿಯಲ್ಲಿ ಲಭ್ಯವಿವೆ,” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಪ್ರಾಂಶುಪಾಲ ಡಾ.ಜಯಪ್ರಕಾಶ್ ಶುಭ ಕೋರಿದರು.
ಅಕಾಡೆಮಿ ಸದಸ್ಯ ಬಾಬು ಕೊರಗ ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.
ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು, ವಿದ್ಯಾರ್ಥಿ ಸುಮಿತ್ ವಂದಿಸಿದರು.
Post a Comment