ಮುಲ್ಕಿ ಕಿಲ್ಪಾಡಿ ದೈವಸ್ಥಾನ ಕಳವು ಪ್ರಕರಣ ಭೇದಿಸಿದ ಪೊಲೀಸರು ; ನಾಲ್ವರು ಅಂತರ ಜಿಲ್ಲಾ ಆರೋಪಿಗಳ ಬಂಧನ | ₹17.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಹನ ವಶ; ಮತ್ತೆರಡು ದೇವಸ್ಥಾನ ಕಳವು ಪ್ರಕರಣಗಳೂ ಪತ್ತೆ


ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು ₹17.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗರ್ಭಗುಡಿಯ ಬೀಗ ಮುರಿದು ಕಳವು : ಸೆಪ್ಟೆಂಬರ್ 1ರಂದು ಮಧ್ಯರಾತ್ರಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 65/2026ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಸೆಪ್ಟೆಂಬರ್ 6ರಂದು ಜಾಹೀದ್ ಸಿನಾನ್ ಹಾಗೂ ಯಾಸೀನ್ ಅವರನ್ನು ಮುಲ್ಕಿ ಕಾರ್ನಾಡಿನಲ್ಲಿ ಬಂಧಿಸಿದ್ದಾರೆ. ಸೆಪ್ಟೆಂಬರ್ 7ರಂದು ಮಹಮದ್ ಅಫ್ರಿದಿ ಹಾಗೂ ಎಸ್.ಕೆ. ಅಬ್ದುಲ್ ಜುಮ್ಮಾನ್ ಅವರನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ.

4.5 ಕೆ.ಜಿ.ಗೂ ಅಧಿಕ ಬೆಳ್ಳಿ, 34.820 ಗ್ರಾಂ ಚಿನ್ನ ವಶ : ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ವೇಳೆ, ಕಳವು ಮಾಡಲಾಗಿದ್ದ ಸುಮಾರು 4 ಕೆ.ಜಿ. 521 ಗ್ರಾಂ ಬೆಳ್ಳಿ ಹಾಗೂ 34.820 ಗ್ರಾಂ ಚಿನ್ನ ಪತ್ತೆಯಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ ₹11.20 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಇದರೊಂದಿಗೆ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಬೈಕ್ ಮತ್ತು ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ₹6 ಲಕ್ಷವಾಗಿದೆ. ಚಿನ್ನ, ಬೆಳ್ಳಿ ಹಾಗೂ ವಾಹನ ಸೇರಿ ಒಟ್ಟು ₹17.20 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.

ಮತ್ತೆರಡು ದೇವಸ್ಥಾನ ಕಳವು ಪ್ರಕರಣ ಬೆಳಕಿಗೆ : ಆರೋಪಿಗಳ ವಿಚಾರಣೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ಮತ್ತೆರಡು ದೇವಸ್ಥಾನ ಕಳವು ಪ್ರಕರಣಗಳೂ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮಹಾಗಣಪತಿ ದೇವಸ್ಥಾನ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿ – ಅ.ಕ್ರ. 154/2026
ಇನ್ನಾ ಗ್ರಾಮದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿ – ಅ.ಕ್ರ. 88/2026

ಈ ಪ್ರಕರಣಗಳಲ್ಲಿಯೂ ಬಂಧಿತ ಆರೋಪಿಗಳ ಪಾತ್ರವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ವಿರುದ್ಧ 18 ಪ್ರಕರಣ : ಪ್ರಕರಣದ ಮೊದಲ ಆರೋಪಿ ಜಾಹೀದ್ ಸಿನಾನ್ ವಿರುದ್ಧ ಈ ಹಿಂದೆ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಮಂಗಳೂರು ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ : ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಮುಲ್ಕಿ ಠಾಣೆಯ ಪಿಎಸ್‌ಐ ರಾಘವೇಂದ್ರ ನಾಯಕ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ತಂಡದಲ್ಲಿ ಭಾಗವಹಿಸಿದ್ದರು.

ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಕಳವು ಮಾಡಲಾದ ಹಾಗೂ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Post a Comment

Previous Post Next Post