ರಘು ಇಡ್ಕಿದು ಅವರ 34ನೇ ಕೃತಿ ಲೋಕಾರ್ಪಣೆ | ‘ಸಾಹಿತ್ಯ ಹೃದಯಗಳನ್ನು ಹೊಲಿಯುವ ಕೆಲಸ ಮಾಡುತ್ತದೆ; ಸಮಾಜವನ್ನು ಬೆಸೆಯುತ್ತದೆ’ : ಡಾ.ಶ್ರೀನಿವಾಸ ಗಿಳಿಯಾರು

ಮಂಗಳೂರು: “ಸಾಹಿತ್ಯ ವಿಧ್ವಂಸಕ ಕೃತ್ಯ ಮಾಡುವುದಿಲ್ಲ; ಅದು ಎಲ್ಲರನ್ನೂ ಜೋಡಿಸುತ್ತದೆ. ಹೃದಯಗಳನ್ನು ಹೊಲಿಯುವ ಕೆಲಸವನ್ನು ಸಾಹಿತ್ಯ ಕೃತಿಗಳು ಮಾಡುತ್ತವೆ. ರಘು ಇಡ್ಕಿದು ಅವರ 34 ಕೃತಿಗಳು ಸಮಾಜದಲ್ಲಿ ಒಡಕು ಮೂಡುವ ಸಂದರ್ಭದಲ್ಲಿ ಜನರನ್ನು ಬೆಸೆಯುವ ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿವೆ” ಎಂದು ವಿಮರ್ಶಕ ಡಾ. ಶ್ರೀನಿವಾಸ ಗಿಳಿಯಾರು ಹೇಳಿದರು.

ಉರ್ವದ ತುಳು ಭವನದ ಡಾ. ವಾಮನ ನಂದಾವರ ಚಾವಡಿಯಲ್ಲಿ ಶನಿವಾರ ನಡೆದ ರಘು ಇಡ್ಕಿದು ಅವರ 34ನೇ ಕೃತಿ ‘ಕೃತಿ ಸಂಸ್ಕೃತಿ’ ಲೇಖನಗಳ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಘು ಇಡ್ಕಿದು ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮಕ್ಕಳ ಕವನಗಳು, ಕಥಾ ಸಂಕಲನಗಳು, ಕವನ ಸಂಕಲನಗಳು, ನಾಟಕಗಳು, ಭಾವಗೀತೆ ರೂಪಕಗಳು, ಅಂಕಣ ಬರಹಗಳು, ಗಜಲ್‌ಗಳು ಹಾಗೂ ಲೇಖನ ಸಂಕಲನ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಮನಾರ್ಹವಾಗಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ರಚನಾ ಕಮ್ಮಟಗಳ ಆಯೋಜನೆ ಹಾಗೂ ಸಂಪಾದಕೀಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಡಾ. ಗಿಳಿಯಾರು ಹೇಳಿದರು.

ಅಧ್ಯಾಪನ ವೃತ್ತಿಯ ಜೊತೆಗೆ ಸಾಹಿತ್ಯ ಚಟುವಟಿಕೆಗಳಿಗೆ ಸಮಯ ಮೀಸಲಿಟ್ಟು, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಎರಡರಿಂದ ಮೂರು ಕೃತಿಗಳನ್ನು ಪ್ರಕಟಿಸುತ್ತಿರುವುದು ಅವರ ಸಾಹಿತ್ಯ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಿದ್ದರು. ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಪಿ. ಕೃಷ್ಣಮೂರ್ತಿ ಹಾಗೂ ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.

ವಿದ್ಯಾ ಪ್ರಕಾಶನ, ಅರೆಹೊಳೆ ಪ್ರತಿಷ್ಠಾನ ಹಾಗೂ ಬಹು ಓದು ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಬ್ರಾಯ ಭಟ್ ನಿರೂಪಿಸಿದರು.

Post a Comment

Previous Post Next Post