ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರದ ಸಹಕಾರದೊಂದಿಗೆ ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರಥಮ ವರ್ಷದ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವ ಸೆ.14ರಂದು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬಳಿಯಿರುವ ಛತ್ರಪತಿ ಶಿವಾಜಿ ವೃತ್ತದಲ್ಲಿ ನಡೆಯಲಿದೆ.
ಉತ್ಸವದ ಅಂಗವಾಗಿ ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವೈದಿಕ ಕಾರ್ಯಕ್ರಮ, ಭಜನೆ :
ಸೆ.14ರಂದು ಬೆಳಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 8.45ಕ್ಕೆ ಗಣಪತಿ ದೇವರ ಬಿಂಬ ಪ್ರತಿಷ್ಠೆ ಹಾಗೂ ಗಣಹೋಮ, 10.30ಕ್ಕೆ ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರ, ಶಕ್ತಿನಗರದ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ.
ಮಧ್ಯಾಹ್ನ 2ರಿಂದ 4ರವರೆಗೆ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 4ಕ್ಕೆ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಧಾರ್ಮಿಕ ಸಭೆ :
ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಉದ್ಯಮಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಾಗೂರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಸ್ತಾವಿಕ ಭಾಷಣ ಮಾಡಲಿದ್ದು, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರ ಶಕ್ತಿನಗರದ ಮಾತಾಜಿ ರಮಾದೇವಿ ಹಾಗೂ ವಿಶ್ವ ಹಿಂದೂ ಪರಿಷತ್ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರದ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ ಉಪಸ್ಥಿತರಿರುವರು.
ಶಿವಾಜಿ ವೃತ್ತದಿಂದ ಭವ್ಯ ಶೋಭಾಯಾತ್ರೆ : ಸಂಜೆ 6 ಗಂಟೆಗೆ ಮಹಾಪೂಜೆ ನಡೆಯಲಿದ್ದು, 6.30ಕ್ಕೆ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ. ಶ್ರೀ ಹಿಂದೂ ಮಹಾ ಶಕ್ತಿ ಗಣಪತಿಯ ಶೋಭಾಯಾತ್ರೆಯು ಶಕ್ತಿನಗರದ ಶಿವಾಜಿ ವೃತ್ತದಿಂದ ಹೊರಟು ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಸಾಗಲಿದೆ.
ಬಳಿಕ ಶೋಭಾಯಾತ್ರೆ ಹಿಂದಿರುಗಿ ಪಡೀಲ್ ಬೈರಾಡಿ ಕೆರೆಯಲ್ಲಿ ಶ್ರೀ ಮಹಾಗಣಪತಿ ದೇವರ ವಿಗ್ರಹದ ಜಲಸ್ತಂಭನ ನೆರವೇರಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment