ಸೌಜನ್ಯ ಪ್ರಕರಣ : ತಾಯಿ-ಮಗಳ ಸಂಬಂಧದ ಬಗ್ಗೆ ತನಿಖೆಗೆ ಆಗ್ರಹಿಸಿ ಎಸ್‌ಐಟಿಗೆ ದೂರು ನೀಡಿದ ಧರ್ಮಸ್ಥಳ ಗ್ರಾಮಸ್ಥ ಕಿಶೋರ್


ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿವಾದಾತ್ಮಕ ದೂರು ಸಲ್ಲಿಕೆಯಾಗಿದೆ. ಸೌಜನ್ಯ ಮತ್ತು ಅವರ ತಾಯಿ ಎಂದು ಗುರುತಿಸಲಾಗಿರುವ ಕುಸುಮಾವತಿ ನಡುವಿನ ಸಂಬಂಧದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ, ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಅವರು ಮಂಗಳೂರಿನ ಎಸ್‌ಐಟಿ ಕಚೇರಿಗೆ ಹಲವು ಪುಟಗಳ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.

ಸೌಜನ್ಯ ಮತ್ತು ಅವರ ಸಹೋದರಿ ಸೌಮ್ಯ ಅವರು ಕುಸುಮಾವತಿಯವರ ಹೆತ್ತ ಮಕ್ಕಳೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಿಶೋರ್, ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಜಮೀನು ಮಂಜೂರಾತಿ ವಿಚಾರವೂ ಉಲ್ಲೇಖ : 2015ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಕೋಂ ಚಂದ್ರಪ್ಪ ಗೌಡ ಎಂಬವರಿಗೆ ಜಮೀನು ಮಂಜೂರಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಈ ಜಮೀನು ಕುಸುಮಾವತಿ ಅವರ ಹೆಸರಿನಲ್ಲಿರುವ ಬಗ್ಗೆ ದಾಖಲೆಗಳಿವೆ ಎಂದು ಕಿಶೋರ್ ತಿಳಿಸಿದ್ದಾರೆ. ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂಬುದಾಗಿ ಸಲ್ಲಿಸಿರುವ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನೂ ಪರಿಶೀಲಿಸುವಂತೆ ಕೋರಿದ್ದಾರೆ. ಈ ಹಿಂದೆ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೂ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ವಿವಿಧ ದಾಖಲೆಗಳ ಪರಿಶೀಲನೆಗೆ ಮನವಿ :
ಆಧಾರ್, ಪಡಿತರ ಚೀಟಿ, ಮತದಾರರ ಪಟ್ಟಿ ಹಾಗೂ ಜನನ-ಮರಣ ನೋಂದಣಿಗಳಲ್ಲಿನ ವ್ಯತ್ಯಾಸಗಳ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ. ಚಂದ್ರಪ್ಪ ಗೌಡರ ಕುಟುಂಬದ ವಂಶವೃಕ್ಷ, ಪತ್ನಿಯರ ವಿವರ, ಪಾರಂಪರಿಕ ಹಕ್ಕಿನ ದಾಖಲೆಗಳು ಹಾಗೂ ನೆರೆಹೊರೆಯವರ ಹೇಳಿಕೆಗಳನ್ನು ಪರಿಶೀಲಿಸುವಂತೆಯೂ ಮನವಿ ಮಾಡಲಾಗಿದೆ.

ಕೊಲೆ ಹಿಂದಿನ ಕಾರಣದ ಬಗ್ಗೆಯೂ ತನಿಖೆಗೆ ಆಗ್ರಹ :
ಸೌಜನ್ಯ ಅವರ ತಾಯಿಯ ಗುರುತಿನ ಬಗ್ಗೆ ದಾಖಲೆಗಳ ಮೂಲಕ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ ಕಾನೂನುಬದ್ಧ ವೈಜ್ಞಾನಿಕ ಪರೀಕ್ಷೆಯ ಸಾಧ್ಯತೆಯನ್ನೂ ಪರಿಗಣಿಸಬೇಕು ಎಂದು ಕಿಶೋರ್ ಕೋರಿದ್ದಾರೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಸುವಂತೆ ಹಾಗೂ ಸೌಜನ್ಯ ಅವರ ಮಾವ ವಿಠಲ ಗೌಡ ಅವರ ಬಗ್ಗೆಯೂ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ದಾಖಲೆಗಳಲ್ಲಿನ ವ್ಯತ್ಯಾಸ, ಗುರುತಿನ ವಂಚನೆ ಹಾಗೂ ಸುಳ್ಳು ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಈ ಆರೋಪಗಳ ಸತ್ಯಾಸತ್ಯತೆ ಮತ್ತು ಎಸ್‌ಐಟಿಯ ಮುಂದಿನ ಕ್ರಮದ ಬಗ್ಗೆ ಗಮನ ಹರಿಸಲಾಗಿದೆ.

Post a Comment

Previous Post Next Post