ಸಂವಿಧಾನ ಅಲುಗಾಡಿಸಿದವರಿಂದಲೇ ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಗಿಮಿಕ್ : ಪದ್ಮರಾಜ್ ಆರ್. ಪೂಜಾರಿ ಟೀಕೆ ; ರಾಜಕೀಯ ಸಮಾವೇಶದಲ್ಲಿ ಕುಣಿತ ಭಜನೆಗೆ ಆಕ್ಷೇಪ

ಮಂಗಳೂರು: ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿ, ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡು ಪ್ರಜಾಪ್ರಭುತ್ವದ ಅಡಿಪಾಯವನ್ನು ಅಲುಗಾಡಿಸಿದ ಬಿಜೆಪಿಯವರು ಇಂದು ‘ಪ್ರಜಾಪ್ರಭುತ್ವ ಉಳಿಸಿ’ ಎಂದು ಬೀದಿಗಿಳಿದಿರುವುದು ಇತಿಹಾಸದಲ್ಲೇ ಕಂಡ ಅತಿದೊಡ್ಡ ರಾಜಕೀಯ ಗಿಮಿಕ್ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಟೀಕಿಸಿದ್ದಾರೆ.

ಸಂವಿಧಾನ ನೀಡಿರುವ ಪವಿತ್ರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ರಾಹುಲ್ ಗಾಂಧಿಯವರು ‘ವೋಟ್ ಚೋರಿ’ ವಿಚಾರವನ್ನು ದೇಶದ ಮುಂದಿಟ್ಟು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ಪರಿಣಾಮವಾಗಿ ದೇಶಾದ್ಯಂತ ಕೋಟ್ಯಂತರ ಸಾಮಾನ್ಯ ನಾಗರಿಕರು, ಯುವಕರು ಹಾಗೂ ಶೋಷಿತ ವರ್ಗದ ಜನರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಜಾಗೃತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನರ ಈ ಹೋರಾಟದಿಂದ ಕಂಗೆಟ್ಟಿರುವ ಆಡಳಿತ ಪಕ್ಷವು ರಾಹುಲ್ ಗಾಂಧಿಯವರ ಹೋರಾಟದ ವಿಚಾರವನ್ನು ಮರೆಮಾಚಲು ಹಾಗೂ ಜನರ ಗಮನವನ್ನು ಬೇರೆಡೆ ಸೆಳೆಯಲು ತಾವೇ ಹೋರಾಟದ ಮುಖವಾಡ ಧರಿಸಿ ನಾಟಕವಾಡುತ್ತಿದೆ. ಆದರೆ ಸಂವಿಧಾನದ ಮೌಲ್ಯಗಳನ್ನು ಕಡೆಗಣಿಸಿದವರ ಕೂಗುಗಳು ಹಕ್ಕುಗಳಿಗಾಗಿ ಹೋರಾಡುತ್ತಿರುವ ಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪದ್ಮರಾಜ್ ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಸಮಾವೇಶದಲ್ಲಿ ಕುಣಿತ ಭಜನೆಗೆ ಆಕ್ಷೇಪ :
ಬಿಜೆಪಿ ಮಂಗಳೂರು ವಿಭಾಗದ ರಾಜಕೀಯ ಸಮಾವೇಶದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಕುಣಿತ ಭಜನೆ ಪ್ರದರ್ಶಿಸಿರುವುದಕ್ಕೆ ಪದ್ಮರಾಜ್ ಆರ್. ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಜನೆ ಎಂಬುದು ಕೇವಲ ನೃತ್ಯ ಅಥವಾ ಕಲೆಯಲ್ಲ. ಅದು ಭಕ್ತಿ, ಸಮರ್ಪಣಾ ಭಾವ ಮತ್ತು ಅಂತರಂಗದ ಶಾಂತಿಯನ್ನು ಅರಸುವ ಪವಿತ್ರ ಆಧ್ಯಾತ್ಮಿಕ ಸಾಧನೆಯಾಗಿದೆ. ದೇಗುಲಗಳ ಪಾವಿತ್ರ್ಯತೆಯಲ್ಲಿ ಹಾಗೂ ಭಕ್ತರ ಶ್ರದ್ಧಾಭರಿತ ವಾತಾವರಣದಲ್ಲಿ ಮೊಳಗಬೇಕಾದ ದೈವಿಕ ಸಂಕೀರ್ತನೆಯನ್ನು ರಾಜಕೀಯ ಸಮಾವೇಶದ ಆಕರ್ಷಣೆಯಾಗಿ ಬಳಸಿರುವುದು ಭಕ್ತಿ ಪರಂಪರೆಗೆ ಮಾಡಿದ ಅಪಚಾರ ಎಂದು ಅವರು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜಕಾರಣವು ಜನರ ನೈಜ ಸಮಸ್ಯೆಗಳು, ಸುಸ್ಥಿರ ಅಭಿವೃದ್ಧಿ ಹಾಗೂ ದಕ್ಷ ಆಡಳಿತದ ಸಿದ್ಧಾಂತಗಳ ಆಧಾರದ ಮೇಲೆ ನಡೆಯಬೇಕೇ ಹೊರತು, ಜನರ ನಂಬಿಕೆಗಳು ಮತ್ತು ದೇವರ ಹೆಸರನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಲ್ಲ ಎಂದು ಅವರು ಹೇಳಿದ್ದಾರೆ.

ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ದೈವಭಕ್ತಿಯನ್ನು ರಾಜಕೀಯ ಪ್ರಚಾರದ ಸರಕನ್ನಾಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಸುಳ್ಳು ಸುದ್ದಿಗಳ ಮೂಲಕ ಜನರ ದಾರಿ ತಪ್ಪಿಸುವ ರಾಜಕಾರಣದಿಂದ ಬಿಜೆಪಿಗೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ರಾಜ್ಯದ ಪ್ರಜ್ಞಾವಂತ ನಾಗರಿಕರು ಇಂತಹ ರಾಜಕೀಯ ತಂತ್ರಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.

Post a Comment

Previous Post Next Post