ಮಂಗಳೂರು : ಜಾಗದ ಮಾಲೀಕತ್ವದ ವಿಚಾರವಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು, ಬಿಲ್ಡರ್ ಒಬ್ಬರು ತಮ್ಮ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಘಟನೆ ಮಂಗಳೂರಿನ ಅಶೋಕನಗರದ ಫಲ್ಗುಣಿ 3ನೇ ಅಡ್ಡರಸ್ತೆಯಲ್ಲಿ ನಡೆದಿದೆ. ಈ ಸಂಬಂಧ ಉರ್ವಾ ಪೊಲೀಸ್ ಠಾಣೆಯಲ್ಲಿ ಎರಡೂ ತಂಡಗಳ ವಿರುದ್ಧ ದೂರು ಹಾಗೂ ಪ್ರತಿದೂರು ದಾಖಲಾಗಿದೆ.
ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿರುವ ಕಾವೂರಿನ ಬಿಲ್ಡರ್ ವೀರೇಂದ್ರ ಶೆಟ್ಟಿ ಹಾಗೂ ಅವರ ಪಾಲುದಾರ ಎರಡು ವರ್ಷಗಳ ಹಿಂದೆ 36 ಸೆಂಟ್ಸ್ ಜಾಗ ಖರೀದಿಸಿ, ಲೇಔಟ್ ನಿರ್ಮಿಸಿ ಸೈಟ್‌ಗಳನ್ನು ಮಾರಾಟ ಮಾಡಿದ್ದರು. ನ.4ರಂದು ಉಳಿದ ಜಾಗಕ್ಕೆ ಕಾಂಪೌಂಡ್ ನಿರ್ಮಿಸುವ ಉದ್ದೇಶದಿಂದ ಜೆಸಿಬಿ ಮೂಲಕ ಮಣ್ಣು ಅಗೆಯುವ ಕೆಲಸ ನಡೆಯುತ್ತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರೆಸ್ಟನ್ ಎಂಬವರು ಸುಮಾರು ಹತ್ತು ಮಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಗಲಾಟೆ ನಡೆಸಿದ್ದಾರೆ ಎಂದು ವೀರೇಂದ್ರ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ಈ ವೇಳೆ ಸೈಟ್ ಖರೀದಿಸಿದ್ದ ಪೃಥ್ವಿ ಶೇಟ್ ಅವರ ಮೇಲೂ ಹಲ್ಲೆ ನಡೆಸಲಾಗಿದ್ದು, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೀರೇಂದ್ರ ಶೆಟ್ಟಿ ಅವರ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ನೆಲಕ್ಕೆ ಒಂದು ಸುತ್ತು ಗುಂಡು ಹಾರಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಪ್ರೆಸ್ಟನ್ ನೀಡಿರುವ ದೂರಿನಲ್ಲಿ, ವಿವಾದಿತ ಜಾಗ ತಮ್ಮದಾಗಿದ್ದು, ಜಂಟಿ ಸರ್ವೆಯಲ್ಲೂ ತಮ್ಮ ಮಾಲೀಕತ್ವ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ನ.4ರಂದು ಜಾಗದಲ್ಲಿ ಜೆಸಿಬಿ ಕೆಲಸ ನಡೆಯುತ್ತಿರುವುದನ್ನು ಕಂಡು ಸ್ನೇಹಿತರೊಂದಿಗೆ ಸ್ಥಳಕ್ಕೆ ತೆರಳಿದಾಗ, ತಾವು ಹಾಕಿದ್ದ ಸರ್ವೆ ಕಲ್ಲುಗಳನ್ನು ತೆರವುಗೊಳಿಸಿರುವುದು ಕಂಡುಬಂದಿದೆ. ಇದನ್ನು ಪ್ರಶ್ನಿಸಿದಾಗ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದು, ಯುವಕನೊಬ್ಬ ಪಿಸ್ತೂಲ್‌ನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಒಂದು ಗುಂಡು ನೆಲಕ್ಕೆ ಹಾಗೂ ಮತ್ತೊಂದು ಗಾಳಿಗೆ ಹಾರಿದೆ ಎಂದು ಆರೋಪಿಸಿದ್ದಾರೆ.
ವೀರೇಂದ್ರ ಶೆಟ್ಟಿ, ಸುಮನಾ ರಾವ್, ರೇಖಾ, ಜೆಸಿಬಿ ಮಾಲೀಕ ಪರಶುರಾಮ ಹಾಗೂ ಸೈಟ್ ಖರೀದಿಸಿದ ಪೃಥ್ವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರೆಸ್ಟನ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಜಾಗದ ಮಾಲೀಕತ್ವದ ವಿವಾದ ಇದೀಗ ಗುಂಡಿನ ದಾಳಿ ಹಾಗೂ ಹಲ್ಲೆ ಆರೋಪಗಳೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಎರಡೂ ಕಡೆಯ ದೂರುಗಳ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೂಚನೆ: ಗುಂಡು ಹಾರಿಸಿದ ಘಟನೆ ಮತ್ತು ಹಲ್ಲೆ ಆರೋಪಗಳ ಕುರಿತು ಎರಡೂ ಕಡೆಯವರು ವಿಭಿನ್ನ ಹೇಳಿಕೆ ನೀಡಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.
Post a Comment