ಮಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯಲ್ಲಿ ವಿಶೇಷ ತನಿಖಾ ತಂಡ (SIT) ಮಹತ್ವದ ಸಾಕ್ಷ್ಯವೊಂದರ ಮರುಪರಿಶೀಲನೆಗೆ ಮುಂದಾಗಿದೆ. ಸೌಜನ್ಯ ಅವರ ಸಾವಿನ ರಹಸ್ಯಕ್ಕೆ ಉತ್ತರ ನೀಡಬಹುದೆಂಬ ನಿರೀಕ್ಷೆ ಮೂಡಿಸಿರುವ 14 ವರ್ಷಗಳ ಹಿಂದಿನ ವೆಜಿನಲ್ ಸ್ವಾಬ್ ಮಾದರಿಯನ್ನು ಇದೀಗ ಮತ್ತೊಮ್ಮೆ DNA ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.
2012ರ ಅಕ್ಟೋಬರ್ 10ರಂದು ಸೌಜನ್ಯ ಅವರ ವೆಜಿನಲ್ ಸ್ವಾಬ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅಕ್ಟೋಬರ್ 20ರಂದು ಬೆಳ್ತಂಗಡಿ ಪೊಲೀಸರು ಈ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆಗ ನಡೆಸಿದ ಪರೀಕ್ಷೆಯಲ್ಲಿ ಮಾದರಿಯಲ್ಲಿ ಫಂಗಸ್ ಪತ್ತೆಯಾಗಿರುವುದಾಗಿ ವರದಿಯಾಗಿತ್ತು ಎಂದು ತಿಳಿದುಬಂದಿದೆ.
ಆದರೆ, ಇದೀಗ ಅದೇ ಮಾದರಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಪರೀಕ್ಷಿಸುವ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಲು SIT ಮುಂದಾಗಿದೆ. ಫಂಗಸ್ ಇರುವ ಮಾದರಿಯಲ್ಲಿಯೂ DNA ಪರೀಕ್ಷೆ ನಡೆಸುವ ತಾಂತ್ರಿಕ ಸಾಮರ್ಥ್ಯ ಹೊಂದಿರುವ ಹೈದರಾಬಾದ್ನ ಅತ್ಯಾಧುನಿಕ ಪ್ರಯೋಗಾಲಯಕ್ಕೆ ಮಾದರಿಯನ್ನು ರವಾನಿಸಲಾಗಿದೆ ಎನ್ನಲಾಗಿದೆ.
ಸುಮಾರು 7-8 ದಿನಗಳ ಹಿಂದೆಯೇ SIT ತಂಡ ಈ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಸದ್ಯ DNA ಪರೀಕ್ಷೆಯ ವರದಿಗಾಗಿ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಮಾದರಿಯಲ್ಲಿ ಪತ್ತೆಯಾಗುವ DNA ಪ್ರೊಫೈಲ್ಗಳನ್ನು ಪ್ರಕರಣದ ತನಿಖೆಯಲ್ಲಿರುವ ಆರೋಪಿಗಳ DNA ಮಾದರಿಗಳೊಂದಿಗೆ ಹೋಲಿಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಹೊಸ ವೈಜ್ಞಾನಿಕ ಸುಳಿವು ಲಭ್ಯವಾಗಬಹುದೇ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಈಗಾಗಲೇ ಹಲವು ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಪ್ರಕರಣದಲ್ಲಿ 14 ವರ್ಷಗಳ ಹಿಂದಿನ ಸಾಕ್ಷ್ಯವನ್ನು ಮರುಪರೀಕ್ಷೆಗೆ ಒಳಪಡಿಸಿರುವುದು ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. DNA ಪರೀಕ್ಷೆಯ ವರದಿ ತನಿಖೆಗೆ ಯಾವ ರೀತಿಯ ನೆರವು ನೀಡಲಿದೆ ಮತ್ತು ಪ್ರಕರಣದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಸದ್ಯ ಎಲ್ಲರ ಗಮನ SIT ತನಿಖೆ ಹಾಗೂ ಹೈದರಾಬಾದ್ ಪ್ರಯೋಗಾಲಯದಿಂದ ಬರಲಿರುವ DNA ವರದಿಯ ಮೇಲಿದೆ.
Post a Comment