ಎಂ.ಆರ್. ಪೂವಮ್ಮ ಅವರಿಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ ; ಪೂವಮ್ಮ ಅವರ ಕ್ರೀಡಾ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ : ವಂದನಾ ಪೈ

ಮಂಗಳೂರು : ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಿರಂತರ ಪರಿಶ್ರಮ ಮತ್ತು ಸಾಧನೆಯ ಮೂಲಕ ಯಶಸ್ಸು ಗಳಿಸಿರುವ ಎಂ.ಆರ್. ಪೂವಮ್ಮ ಅವರ ಕ್ರೀಡಾ ಬದುಕು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ ಎಂದು ಮಾಜಿ ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ವಂದನಾ ಪೈ ಹೇಳಿದರು.

ನಗರದ ಹೋಟೆಲ್ ಸೀ ವ್ಯೂ ಸಭಾಂಗಣದಲ್ಲಿ ಶುಕ್ರವಾರ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ 24ನೇ ವಾರ್ಷಿಕ ವಂದನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಎಂ.ಆರ್. ಪೂವಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ.ಆರ್. ಪೂವಮ್ಮ, ತಮ್ಮ ಕ್ರೀಡಾ ಸಾಧನೆ ಮತ್ತು ಯಶಸ್ಸಿನ ಹಿಂದೆ ಪೋಷಕರ ಆಶೀರ್ವಾದ, ಬಂಧುಮಿತ್ರರ ಬೆಂಬಲ ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹವಿದೆ ಎಂದರು. ಈ ಪ್ರಶಸ್ತಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದು ತಿಳಿಸಿ ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ದೇವದಾಸ್ ರೈ ಮಾತನಾಡಿ, ವಂದನಾ ಪ್ರಶಸ್ತಿಯು ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಭಾಗವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಪೂವಮ್ಮ ಅವರ ಸುದೀರ್ಘ ಕ್ರೀಡಾ ಸಾಧನೆಯನ್ನು ಶ್ಲಾಘಿಸಿದರು.

ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಅಧ್ಯಕ್ಷ ರಕ್ಷಣ್ ಟಿ.ಆರ್. ಅವರು ಪ್ರಶಸ್ತಿ ವಿಜೇತರ ಪರಿಚಯ ಹಾಗೂ ಸಾಧನೆಗಳ ವಿವರ ನೀಡಿದರು. ಗೌರವ ಅತಿಥಿಯಾಗಿ ಪಾಲ್ಗೊಂಡ ರೋಟರಿ ವಲಯ ಸಹಾಯಕ ಗವರ್ನರ್ ಪ್ರವೀಣ್ ಕುಮಾರ್ ಶರ್ಮಾ ಅವರು ಸಂಸ್ಥೆಯ ಗೃಹವಾರ್ತಾ ಪತ್ರಿಕೆ 'ಸೆಂಟೋರ್' ಬಿಡುಗಡೆಗೊಳಿಸಿ, ಪೂವಮ್ಮ ಅವರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಜಾಕ್ಸನ್ ಸಲ್ದಾನಾ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಮಹೇಶ್ ಮತ್ತು ಶ್ರೀಕಾಂತ್ ಅವರನ್ನು ಸಂಸ್ಥೆಯ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.

ವೇದಿಕೆಯಲ್ಲಿ ವಲಯ ಪ್ರತಿನಿಧಿ ರಾಜೇಶ್ ಶೆಟ್ಟಿ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಭಾಸ್ಕರ್ ರೈ ಉಪಸ್ಥಿತರಿದ್ದರು. ಡೆರಿಕ್ ಸ್ಟೀವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ರೋಟರಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಮುಕೇಶ್ ವಂದಿಸಿದರು.

ಶೇಕ್ ಮಹಮ್ಮದ್ ಶರೀಫ್, ಬ್ರಿಯಾನ್ ಪಿಂಟೊ ಹಾಗೂ ಮುರಳಿ ನಾಯರ್ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.

Post a Comment

Previous Post Next Post