ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಗ್ರಾಮದ ಪ್ರಮುಖ ಭಾಗಗಳಲ್ಲಿ ಕಸದ ರಾಶಿಗಳನ್ನು ಕಾಣುವ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ಕಸ ವಿಲೇವಾರಿಗಾಗಿ ಪಂಚಾಯತ್ ವತಿಯಿಂದ ಯಾವುದೇ ಕ್ರಮ ಕೈಗೊಳ್ಳದೆ ಬಹುತೇಕ ಮಂದಿ ರಸ್ತೆ ಬದಿಯಲ್ಲೇ ಕಸ ಬಿಸಾಡಿ ಹೋಗುತ್ತಿದ್ದು, ಊರಿನ ಅಂದವನ್ನೇ ಕೆಡಿಸುತ್ತಿದೆ. ಹಲವು ಸಮಯದ ಹಿಂದೆ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸ ಆರಂಭಗೊಂಡಿತ್ತು ಆದರೆ ಅದು ಸಮರ್ಪಕವಾಗಿ ಮುಂದುವರಿಯಲಿಲ್ಲ.
ಅದ್ಯಪಾಡಿಯಿಂದ ಕೆಂಜಾರ್ ಕಡೆಗೆ ಹೋಗುವ ಶಾಲಾ ಸಮೀಪದ ರಸ್ತೆ ಬದಿಯಲ್ಲಿ ಅಥವಾ ಸಂಕೇಶ ಸಮೀಪ ರಸ್ತೆ ಬದಿಗಳಲ್ಲಿ ಕಸವನ್ನು ಎಸೆಯಲಾಗುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗುತ್ತಿದೆ.
ಉಣಿಲೆ ಹಾಗೂ ಮಂಗಳೂರು ಹಳೆ ಏರ್ಪೋರ್ಟ್ ರಸ್ತೆಯಲ್ಲೂ ಕಸ ಬಿಸಾಡುವವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಂಚಾಯಿತಿ ಎಡವಿರುವುದು ಗೋಚರವಾಗುತ್ತಿದೆ. ಸ್ಥಳೀಯರು ಕಸ ಸಂಗ್ರಹಿಸಿ ಊರಿನ ಅಂದ ಉಳಿಸುವ ಕೆಲಸವನ್ನು ಒಮ್ಮೆ ಮಾಡಿದ್ದರೂ ಈಗ ಗ್ರಾಮದ ಹಲವು ಭಾಗಗಳಲ್ಲಿ ಕಸ ಬಿಸಾಡುವವರ ಸಮಸ್ಯೆ ಊರಿನ ಅಂದಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಬಗ್ಗೆ ಪಂಚಾಯಿತಿ ಆಡಳಿತಾಧಿಕಾರಿ ಗಮನ ಹರಿಸಬೇಕಿದೆ.
Post a Comment