ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದಕ್ಕೆ ಚೂರಿ ಇರಿತ : ಬಂಟ್ವಾಳದಲ್ಲಿ ಆರೋಪಿ ಬಂಧನ

ಬಂಟ್ವಾಳ: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ಸಂಬಂಧಿಸಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಪಲ್ಲಮಜಲು ಜಂಕ್ಷನ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಬಿ. ಮೂಡಾ ಗ್ರಾಮದ ಲೋಕೇಶ್ (27) ನೀಡಿದ ದೂರಿನ ಪ್ರಕಾರ, ಅವರ ಸಹೋದರ ಉದಯ್ ಎಂಬವರು ಅದೇ ಗ್ರಾಮದ ಅಜಿತ್ ಕಲ್ಲಗುಡ್ಡೆ ಎಂಬಾತನಿಗೆ ಹಣವನ್ನು ಸಾಲವಾಗಿ ನೀಡಿದ್ದರು. ಸಾಲದ ಹಣವನ್ನು ವಾಪಸ್ ನೀಡುವಂತೆ ಉದಯ್ ಕೇಳಿದಾಗ, ಅ. 17ರ ರಾತ್ರಿ ಹಣ ನೀಡುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲಿಗೆ ಬರುವಂತೆ ಹೇಳಿದ್ದಾನೆ.

ಅದರಂತೆ ಹಣ ಪಡೆಯಲು ಉದಯ್ ಪಲ್ಲಮಜಲು ಜಂಕ್ಷನ್‌ಗೆ ತೆರಳಿದ್ದರು. ಈ ವೇಳೆ ಆರೋಪಿ ಅಜಿತ್ ಚೂರಿಯಿಂದ ಉದಯ್ ಅವರಿಗೆ ಇರಿದಿದ್ದಾನೆ ಎನ್ನಲಾಗಿದೆ. ಇದನ್ನು ತಡೆಯಲು ಮುಂದಾದ ಲೋಕೇಶ್ ಅವರನ್ನೂ ಆರೋಪಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಸ್ಥಳೀಯರು ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 144/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 118(2), 109(1) ಮತ್ತು 351(2)ರಂತೆ ಪ್ರಕರಣ ದಾಖಲಾಗಿದೆ.

ಪ್ರಕರಣದ ಆರೋಪಿಯಾದ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post