ಮಂಗಳೂರು: ತುಳು ಪರಿಷತ್ ವತಿಯಿಂದ ‘ಆಟಿಡೊಂಜಿ ಕಜ್ಜ’ ಕಾರ್ಯಕ್ರಮವು ಆಗಸ್ಟ್ 9ರಂದು ಕದ್ರಿ ಮಲ್ಲಿಕಟ್ಟೆಯ ಸುಮ ಸದನದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಅಬಕಾರಿ ಸೂಪರಿಂಟೆಂಡೆಂಟ್ ಸದಾನಂದ ಹೆಗ್ಡೆ ಅವರು ಪಿಂಗಾರ ಹೂ ಅರಳಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ‘ಆಟಿದ ಮದಿಪು’ ಕುರಿತು ಮಾತನಾಡಿದ ಸುಧಾ ನಾಗೇಶ್ ಅವರು, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಹೇಗಿತ್ತು ಹಾಗೂ ಕಠಿಣ ಪರಿಸ್ಥಿತಿಯ ನಡುವೆಯೂ ನಮ್ಮ ಪೂರ್ವಜರು ಹೇಗೆ ಜೀವನ ನಡೆಸುತ್ತಿದ್ದರು ಎಂಬುದನ್ನು ವಿವರಿಸಿದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ವಿವಿಧ ಸೊಪ್ಪು, ತರಕಾರಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪೂರ್ವಜರು ಆರೋಗ್ಯಕರವಾಗಿ ಬದುಕುತ್ತಿದ್ದ ರೀತಿಯನ್ನು ಅವರು ಸವಿಸ್ತಾರವಾಗಿ ತಿಳಿಸಿದರು.
ಚೆಮ್ಮಣ್ಣೂರು ಜ್ಯುವೆಲರಿಯ ರೀಜನಲ್ ಮ್ಯಾನೇಜರ್ ಜಯಪ್ರಕಾಶ್ ಅವರು ಮಾತನಾಡಿ, ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ ಮತ್ತು ಪರಂಪರೆಯ ಸೊಗಸನ್ನು ಕೊಂಡಾಡಿದರು.
ಡಾ. ಪ್ರಭಾಕರ್ ನೀರ್ಮಾರ್ಗ ಅವರು ‘ಆಟಿದ ಕುಸಲ್’ ಕುರಿತು ಮಾತನಾಡಿ, ಹಿರಿಯರ ಅನುಭವ ಮತ್ತು ಜೀವನ ಮೌಲ್ಯಗಳನ್ನು ಗೌರವಿಸುವ ಅಗತ್ಯವನ್ನು ತಿಳಿಸಿದರು.
ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಮಾತನಾಡಿ, ಹಿಂದಿನ ಕಾಲಘಟ್ಟದಲ್ಲಿ ಆಟಿ ತಿಂಗಳಲ್ಲಿ ತುಳುನಾಡಿನ ವಿವಿಧ ಜನಾಂಗದವರು ಪರಸ್ಪರ ಅನ್ಯೋನ್ಯತೆಯಿಂದ ಬದುಕುತ್ತಿದ್ದರು. ಕಷ್ಟ-ಸುಖಗಳಲ್ಲಿ ಒಬ್ಬರು ಮತ್ತೊಬ್ಬರಿಗೆ ಸ್ಪಂದಿಸುತ್ತಿದ್ದರು. ಇಂತಹ ಸೌಹಾರ್ದಯುತ ಬದುಕಿನ ಪರಂಪರೆಯನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. ತುಳುನಾಡಿನ ವಿವಿಧ ಭಾಷೆ, ಜಾತಿ ಮತ್ತು ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುವ ಮೂಲಕ ತುಳುನಾಡನ್ನು ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಹಲವು ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಭಾಗವಹಿಸಿದ್ದವರಿಗೆ ವಿವಿಧ ಆಟಿ ಸಾಂಪ್ರದಾಯಿಕ ಖಾದ್ಯಗಳನ್ನು ಪರಿಚಯಿಸುವ ಹಾಗೂ ಸವಿಯುವ ಅವಕಾಶವೂ ಕಲ್ಪಿಸಲಾಗಿತ್ತು.
ವೇದಿಕೆಯಲ್ಲಿ ಶಕ್ತಿ ಲಯನ್ಸ್ ಅಧ್ಯಕ್ಷೆ ಹಸೀನಾ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ಕಾರ್ಯದರ್ಶಿ ಅಮಿತಾ ಅಶ್ವಿನ್ ಹಾಗೂ ಕೋಶಾಧಿಕಾರಿ ಸುಮತಿ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ರಾಕೇಶ್ ಕುಂದರ್ ವಂದಿಸಿದರು. ಅಮಿತಾ ಅಶ್ವಿನ್ ಕಾರ್ಯಕ್ರಮ ನಿರೂಪಿಸಿದರು.
Post a Comment