ಮೈಸೂರು : ಆ.12ರಂದು ಅದಮ್ಯ ರಂಗಶಾಲೆಯಿಂದ ಪಿಯುಸಿ ಪಠ್ಯಾಧಾರಿತ ರಂಗರೂಪ ಪ್ರದರ್ಶನ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ

ಮೈಸೂರು: ಅದಮ್ಯ ರಂಗಶಾಲೆಯ ವತಿಯಿಂದ ನಗರದ ಹೂಟಗಳ್ಳಿಯ ದಕ್ಷ ಕಾಲೇಜಿನ ಸಭಾಂಗಣದಲ್ಲಿ ಆ. 12ರಂದು ಸಂಜೆ 6 ಗಂಟೆಗೆ ‘ಪಿಯುಸಿ ಪಠ್ಯಾಧಾರಿತ ರಂಗರೂಪ ಪ್ರದರ್ಶನ ಹಾಗೂ ಗಣ್ಯ ಸಾಧಕರಿಗೆ ಅಭಿನಂದನಾ ಸಮಾರಂಭ’ ಆಯೋಜಿಸಲಾಗಿದೆ ಎಂದು ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಪಿ. ಜಯಚಂದ್ರರಾಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾಗಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ. ಲಿಂಗರಾಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ ಪುರಸ್ಕೃತ ಸಾಹಿತಿ ಟಿ. ಸತೀಶ್ ಜವರೇಗೌಡ ಅವರನ್ನು ಅಭಿನಂದಿಸಲಾಗುವುದು.

ಸಮಾರಂಭವನ್ನು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಾಗರಾಜು ವಿ. ಭೈರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಪ್ರಸಿದ್ಧ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಅವರು ಗಣ್ಯ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಿದ್ದಾರೆ.

ಸಮಾರಂಭದಲ್ಲಿ ಪಿಯುಸಿ ವಿದ್ಯಾರ್ಥಿಗಳ ಪಠ್ಯಕ್ರಮ ಆಧರಿಸಿದ ರಂಗರೂಪ ಪ್ರದರ್ಶನವೂ ನಡೆಯಲಿದ್ದು, ವಿದ್ಯಾರ್ಥಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Post a Comment

Previous Post Next Post