ಮಂಗಳೂರು: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಘೋಷಿಸಲಾಗಿದ್ದ ರಜೆಯಿಂದ ಉಂಟಾದ ಬೋಧನಾ ಅವಧಿಯ ನಷ್ಟವನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಆಗಸ್ಟ್ ಮೂರನೇ ವಾರದಿಂದ ಶನಿವಾರ ಅಪರಾಹ್ನದ ಅವಧಿಯಲ್ಲೂ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸುವಂತೆ ಹಾಗೂ ವಾರದ ಸಾಮಾನ್ಯ ದಿನಗಳಲ್ಲಿ ಸಂಜೆ ಒಂದು ಹೆಚ್ಚುವರಿ ಬೋಧನಾ ಅವಧಿಯನ್ನು ನಡೆಸುವಂತೆ ಉಪನಿರ್ದೇಶಕರ ಕಚೇರಿ (ಆಡಳಿತ) ಸೂಚಿಸಿದೆ.
ತಾಲೂಕುವಾರು ಮಳೆ ರಜೆ ವಿವರ:
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಹಾಗೂ ಮೂಡುಬಿದಿರೆ: 8 ಪೂರ್ಣ ದಿನ ಹಾಗೂ 1 ಅರ್ಧ ದಿನ.
ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ: 9 ಪೂರ್ಣ ದಿನ.
ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಹೆಚ್ಚುವರಿ ತರಗತಿಗಳ ವೇಳಾಪಟ್ಟಿಯನ್ನು ರೂಪಿಸುವಂತೆ ಸೂಚಿಸಲಾಗಿದೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC)ಯೊಂದಿಗೆ ಸಮಾಲೋಚನೆ ನಡೆಸಿ ಹೆಚ್ಚುವರಿ ತರಗತಿಗಳ ದಿನ ಹಾಗೂ ಸಮಯವನ್ನು ನಿಗದಿಪಡಿಸಬೇಕು ಎಂದು ತಿಳಿಸಲಾಗಿದೆ.
ಇದಲ್ಲದೆ, ಬಾಕಿ ಉಳಿದಿರುವ ಪಠ್ಯಕ್ರಮವನ್ನು ಶೈಕ್ಷಣಿಕ ಮಾರ್ಗಸೂಚಿಯಂತೆ ಪೂರ್ಣಗೊಳಿಸಲು ಸೂಕ್ತ ವೇಳಾಪಟ್ಟಿ ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ನಿರ್ದೇಶನ ನೀಡಲಾಗಿದೆ.
Post a Comment