Mangalore Railway | ಮಂಗಳೂರು ರೈಲ್ವೆ ಜಾಲ ವರ್ಗಾವಣೆ: ವಿರೋಧ ವ್ಯಕ್ತಪಡಿಸಿದ ಕೇರಳ ಸಿಎಂ, ಮರುಪರಿಶೀಲನೆಗೆ ಕೇಂದ್ರಕ್ಕೆ ಪತ್ರ

ತಿರುವನಂತಪುರಂ: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಗೆ ವರ್ಗಾಯಿಸಿರುವ ರೈಲ್ವೆ ಮಂಡಳಿಯ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿರ್ಧಾರವನ್ನು ಮರುಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.

ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಬೇರ್ಪಡಿಸುವ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಸತೀಶನ್ ಆರೋಪಿಸಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂಬುದು ಕೇರಳದ ಒಮ್ಮತದ ನಿಲುವಾಗಿದ್ದು, ರಾಜ್ಯದ ಸಂಸದರ ಸಹಕಾರದೊಂದಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಹೇಳಿದ್ದಾರೆ.

ಪೂರ್ವ ಸಮಾಲೋಚನೆ ನಡೆಸಿಲ್ಲ : ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿ ಬದಲಾವಣೆ ಮಾಡುವ ಮುನ್ನ ಕೇರಳ ಸರ್ಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸಿಲ್ಲ ಅಥವಾ ಮಾಹಿತಿ ನೀಡಿಲ್ಲ ಎಂದು ಸತೀಶನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳ್ಳಾಲದಿಂದ ಮಂಗಳೂರು ಜಂಕ್ಷನ್‌ವರೆಗಿನ ಪ್ರಮುಖ ನಿಲ್ದಾಣಗಳು ನೈರುತ್ಯ ರೈಲ್ವೆಗೆ ಸೇರ್ಪಡೆಯಾಗುವುದರಿಂದ ಪಾಲಕ್ಕಾಡ್ ವಿಭಾಗಕ್ಕೆ ಗಣನೀಯ ಆದಾಯ ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮಂಗಳೂರು ಜಂಕ್ಷನ್ ಅನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ರೈಲ್ವೆಗೆ ಸೇರಿಸುವುದು ಸ್ವೀಕಾರಾರ್ಹವಲ್ಲ. ಇದರಿಂದ ದಕ್ಷಿಣ ರೈಲ್ವೆ ಹಾಗೂ ಕೇರಳದ ಆದಾಯ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ದಶಕಗಳ ಕರಾವಳಿ ಹೋರಾಟಕ್ಕೆ ಫಲ : ಮಂಗಳೂರು ರೈಲ್ವೆ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ಮಂಗಳೂರು ಪ್ರದೇಶದಿಂದ ಸಂಗ್ರಹವಾಗುತ್ತಿದ್ದ ಆದಾಯ ಪಾಲಕ್ಕಾಡ್ ವಿಭಾಗಕ್ಕೆ ಸೇರುತ್ತಿತ್ತು. ಕರಾವಳಿ ಭಾಗದ ರೈಲ್ವೆ ಬೇಡಿಕೆಗಳಿಗೆ ಸೂಕ್ತ ಆದ್ಯತೆ ಸಿಗುತ್ತಿಲ್ಲ ಎಂಬ ಅಸಮಾಧಾನ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿತ್ತು. ಹೀಗಾಗಿ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್‌ನಿಂದ ಬೇರ್ಪಡಿಸಿ ನೈರುತ್ಯ ರೈಲ್ವೆಗೆ ಸೇರ್ಪಡೆಗೊಳಿಸಬೇಕು ಎಂಬುದು ಕರಾವಳಿಯ ರೈಲ್ವೆ ಹೋರಾಟಗಾರರ ಪ್ರಮುಖ ಬೇಡಿಕೆಯಾಗಿತ್ತು.

ಅಭಿವೃದ್ಧಿಗೆ ವೇಗ ಸಿಗುವ ನಿರೀಕ್ಷೆ : ಮಂಗಳೂರು ಇದೀಗ ಕರ್ನಾಟಕದ ನೈರುತ್ಯ ರೈಲ್ವೆ ವ್ಯಾಪ್ತಿಗೆ ಬರುವುದರಿಂದ ಕರಾವಳಿ–ಬೆಂಗಳೂರು ನಡುವೆ ಹೊಸ ರೈಲು ಸೇವೆಗಳು, ವೇಳಾಪಟ್ಟಿ ಬದಲಾವಣೆ, ಸಂಪರ್ಕ ವ್ಯವಸ್ಥೆ ಸುಧಾರಣೆ ಹಾಗೂ ರೈಲು ನಿಲ್ದಾಣಗಳ ಮೇಲ್ದರ್ಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್‌ನಿಂದ ನೈರುತ್ಯ ರೈಲ್ವೆಗೆ ಸೇರಿಸುವುದು ಕರಾವಳಿಗರ ಹಲವು ದಶಕಗಳ ಕನಸಾಗಿದ್ದು, ಇದೀಗ ಅದು ನನಸಾಗಿದೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಹೇಳಿದ್ದಾರೆ. ಇದರಿಂದ ಕರಾವಳಿ ಭಾಗದ ರೈಲ್ವೆ ಆದಾಯವು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Post a Comment

Previous Post Next Post