ಮಂಗಳೂರು : ಕುಡುಬಿ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ‘ಕುಡ್ಮಿ ಸಿಗ್ಮೋ ನಾಟಕ್ ಪೋಂತ್–2026’ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಭಿತ್ತಿಪತ್ರಗಳನ್ನು ಎಡಪದವು ಹನುಮಾನ್ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.
ಕುಡುಬಿ ಸಮುದಾಯವು ತನ್ನ ವಿಶಿಷ್ಟ ಆಚರಣೆ, ಕಲೆ, ಸಂಸ್ಕೃತಿ ಮತ್ತು ಕೊಂಕಣಿ ಭಾಷೆಯ ಮೂಲಕ ಸಮಾಜದಲ್ಲಿ ವಿಶೇಷ ಗುರುತನ್ನು ಹೊಂದಿದೆ. ಮಾತೃಭಾಷೆ ಕೊಂಕಣಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ನಾಟಕ ಪಂಥವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಸಮಾಜದ ಪ್ರತಿಭಾವಂತ ಯುವಕರಿಗೆ ಮೊದಲ ಬಾರಿಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಹಾಡು, ನೃತ್ಯ, ಸ್ತಬ್ಧಚಿತ್ರಗಳು, ವಸ್ತು ಪ್ರದರ್ಶನ ಹಾಗೂ ಪಾರಂಪರಿಕ ಕಲಾ ಪ್ರದರ್ಶನಗಳು ನಡೆಯಲಿವೆ.
ಆಗಸ್ಟ್ 9, 2026 (ಭಾನುವಾರ) ರಂದು ಎಡಪದವು ಚಂದು ನಿಕೇತನ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಮಾಜದ ಮುಖಂಡರು, ಸಂಸದರು ಹಾಗೂ ಶಾಸಕರು ಭಾಗವಹಿಸುವ ನಿರೀಕ್ಷೆಯಿದೆ.
ಆಹ್ವಾನ ಪತ್ರಿಕೆ ಮತ್ತು ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ಕುಡ್ಮಿ ಸಿಗ್ಮೋ ಸಮಿತಿಯ ಪದಾಧಿಕಾರಿಗಳು ಹಾಗೂ ಕುಡುಬಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
Post a Comment