ಮೂಡುಬಿದಿರೆ : ಗಾಲಿಕುರ್ಚಿಯಲ್ಲೇ ಬಂದು ಉದ್ಯೋಗ ಪಡೆದ ಬಂಟ್ವಾಳದ ಭಾಗ್ಯಶ್ರೀ ; ಆಳ್ವಾಸ್ ಪ್ರಗತಿ-2026ರಿಂದ ಬಾಳಿಗೆ ಹೊಸ ಬೆಳಕು

ಮೂಡುಬಿದಿರೆ: ದೈಹಿಕ ಸವಾಲುಗಳ ನಡುವೆಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಉದ್ಯೋಗದ ಹುಡುಕಾಟದಲ್ಲಿದ್ದ ಎಂ.ಕಾಂ ಪದವೀಧರೆ ಭಾಗ್ಯಶ್ರೀ ಕುಲಾಲ್ ಅವರ ಬದುಕಿಗೆ ‘ಆಳ್ವಾಸ್ ಪ್ರಗತಿ-2026’ ಬೃಹತ್ ಉದ್ಯೋಗ ಮೇಳ ಹೊಸ ಆಶಾಕಿರಣ ಮೂಡಿಸಿದೆ.

ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಎಂ.ಕಾಂ ಪದವಿ ಪಡೆದಿರುವ ಭಾಗ್ಯಶ್ರೀ, ಕಳೆದ ಒಂದು ವರ್ಷದಿಂದ ಸೂಕ್ತ ಉದ್ಯೋಗಕ್ಕಾಗಿ ಕಾಯುತ್ತಿದ್ದರು. ದೈಹಿಕ ಸವಾಲುಗಳನ್ನು ಮೆಟ್ಟಿ ನಿಂತ ಅವರು, ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲೇ ಉದ್ಯೋಗ ಮೇಳಕ್ಕೆ ಆಗಮಿಸಿದರು.

ಮೇಳದಲ್ಲಿ ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿದ ಭಾಗ್ಯಶ್ರೀ, ತಮ್ಮ ವಿದ್ಯಾರ್ಹತೆ ಹಾಗೂ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಮೈಸೂರಿನ ಪ್ರಸಿದ್ಧ ರೆಡ್ಡಿಸ್ ಫೌಂಡೇಷನ್‌ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಉದ್ಯೋಗ ದೊರೆತ ಸಂತಸ ಹಂಚಿಕೊಂಡ ಭಾಗ್ಯಶ್ರೀ, “ಕಳೆದ ಒಂದು ವರ್ಷದಿಂದ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆಳ್ವಾಸ್ ಪ್ರಗತಿಗೆ ಬಂದು ಸಂದರ್ಶನ ಎದುರಿಸಿದ ಬಳಿಕ ನನಗೆ ಈ ಕೆಲಸ ದೊರೆತಿದೆ. ಮೈಸೂರಿಗೆ ತೆರಳಿ ಕರ್ತವ್ಯ ನಿರ್ವಹಿಸಲು ಸಿದ್ಧಳಾಗಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದೈಹಿಕ ವಿಶೇಷಚೇತನತೆ ಉದ್ಯೋಗ ಹಾಗೂ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾಗ್ಯಶ್ರೀ ತಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದ ಮೂಲಕ ತೋರಿಸಿದ್ದಾರೆ. ‘ಆಳ್ವಾಸ್ ಪ್ರಗತಿ-2026’ ಉದ್ಯೋಗ ಮೇಳವು ಅವರ ವೃತ್ತಿ ಬದುಕಿಗೆ ಹೊಸ ದಿಕ್ಕು ನೀಡುವುದರೊಂದಿಗೆ, ಇತರ ವಿಶೇಷಚೇತನ ಉದ್ಯೋಗಾಕಾಂಕ್ಷಿಗಳಿಗೂ ಪ್ರೇರಣೆಯಾಗಿದೆ.

Post a Comment

Previous Post Next Post