ಮಂಗಳೂರು : 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಸಂದ ಐದು ಪ್ರಮುಖ ಪ್ರಶಸ್ತಿಗಳ ಹಿಂದೆ ಕರಾವಳಿಯ ಪ್ರತಿಭೆಗಳ ಸಾಧನೆ ವಿಶೇಷವಾಗಿ ಗಮನ ಸೆಳೆದಿದೆ.
ಅಭಿನಯ, ನಿರ್ಮಾಣ, ನಿರ್ದೇಶನ ಹಾಗೂ ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರಾವಳಿ ಕಲಾವಿದರು ತಮ್ಮ ಛಾಪು ಮೂಡಿಸಿ ಕನ್ನಡದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಯಲ್ಲಿ ರೂಪಶ್ರೀ ವರ್ಕಾಡಿ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಿಸಿ, ಸುಮಂತ್ ಭಟ್ ನಿರ್ದೇಶಿಸಿರುವ 'ಮಿಥ್ಯ' ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಇದೇ ಚಿತ್ರದಲ್ಲಿ ಅಭಿನಯಿಸಿದ ಅತೀಶ್ ಶೆಟ್ಟಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನೊಂದೆಡೆ ನವೀನ್ ಡಿ.ಪಡೀಲ್ ಮುಖ್ಯ ಭೂಮಿಕೆಯಲ್ಲಿರುವ ಶಿವಧ್ವಜ್ ನಿರ್ದೇಶನದ 'ಇಂಬು' ಚಿತ್ರ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದು, ಇದರ ನಿರ್ಮಾಪಕರಾದ ಪ್ರಕಾಶ್ ರೈ ಕೂಡ ಕರಾವಳಿ ಮೂಲದವರಾಗಿದ್ದಾರೆ.
ಚಿತ್ರರಂಗದ ಸಾಹಿತ್ಯ ಕ್ಷೇತ್ರದಲ್ಲೂ ಕರಾವಳಿಯ ಸಾಧನೆ ಮೆರೆಯಲಾಗಿದ್ದು, ಕೆಂಚನೂರು ಪ್ರದೀಪ್ ಶೆಟ್ಟಿ ಅವರಿಗೆ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿದೆ.
ಕರಾವಳಿಯ ಕಲಾವಿದರು ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದು, ಲೀಲಾವತಿ, ಪಂಡರೀಬಾಯಿ, ಜಯಮಾಲಾ, ಕಲ್ಪನಾ, ಕಾಶಿನಾಥ್, ಉಪೇಂದ್ರ, ವಿ. ಮನೋಹರ್, ಗುರುಕಿರಣ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ರವಿ ಬಸ್ರೂರ್ ಸೇರಿದಂತೆ ಅನೇಕರು ಕನ್ನಡ ಸಿನಿರಂಗದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
Post a Comment