ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ಆಹಾರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ನಗರದ ರಸ್ತೆಬದಿ ಆಹಾರ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ನಡೆಸಿದೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಹಲವು ರಸ್ತೆಬದಿ ತಿಂಡಿ-ತಿನಿಸುಗಳ ಮಳಿಗೆಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಆಹಾರ ತಯಾರಿಕೆಯಲ್ಲಿ ನಿಯಮಬಾಹಿರವಾಗಿ ಬಳಸಲಾಗುತ್ತಿದ್ದ ಅಜಿನೋಮೋಟೊ (ಮೊನೋಸೋಡಿಯಂ ಗ್ಲುಟಮೇಟ್) ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ವಶಕ್ಕೆ ಪಡೆದಿದ್ದಾರೆ.
ತಪಾಸಣೆ ವೇಳೆ ಆಹಾರ ತಯಾರಿಕೆ, ಸ್ವಚ್ಛತೆ, ಆಹಾರ ಸಂಗ್ರಹಣೆ ಸೇರಿದಂತೆ ವಿವಿಧ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಕೆಲವು ಮಳಿಗೆಗಳಲ್ಲಿ ರುಚಿ ಹೆಚ್ಚಿಸುವ ಉದ್ದೇಶದಿಂದ ಅತಿಯಾದ ಪ್ರಮಾಣದಲ್ಲಿ ಅಜಿನೋಮೋಟೊ ಬಳಸಲಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳನ್ನು ಪ್ರತಿಯೊಬ್ಬ ಆಹಾರ ವ್ಯಾಪಾರಿಯೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಆಹಾರ ತಯಾರಿಕೆ ಅಥವಾ ನಿಷೇಧಿತ/ಹಾನಿಕರ ಪದಾರ್ಥಗಳ ಬಳಕೆ ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Post a Comment