ಕಡಬ : ರಸ್ತೆ ದಾಟುತ್ತಿದ್ದ ವೃದ್ಧರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಸುಬ್ರಹ್ಮಣ್ಯ, ಜುಲೈ 14: ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 68 ವರ್ಷದ ವೃದ್ಧರು ಮೃತಪಟ್ಟ ಘಟನೆ ಜುಲೈ 11ರಂದು ನಡೆದಿದೆ.

ಮೃತರನ್ನು ಮುತ್ಲಾಜೆ ನಿವಾಸಿ ಚೆನ್ನಪ್ಪ ಗೌಡ (68) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಕೆಎ 19 ಎಫ್‌ 2952 ನೋಂದಣಿಯ ಕೆಎಸ್‌ಆರ್‌ಟಿಸಿ ಬಸ್‌ನ್ನು ಚಾಲಕ ವಿಘ್ನೇಶ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ರಸ್ತೆ ದಾಟುತ್ತಿದ್ದ ಚೆನ್ನಪ್ಪ ಗೌಡ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಚೆನ್ನಪ್ಪ ಗೌಡ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.

ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಮೃತರ ಸಂಬಂಧಿ ಮನಮೋಹನ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 106ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Post a Comment

Previous Post Next Post