ಪಾಲೆಮಾರ್ ಇವೆಂಟ್ಸ್ ವತಿಯಿಂದ ಮಂಗಳೂರಿನಲ್ಲಿ 'ಸ್ಟೀಮ್-ಪ್ರೂಫ್, ಡ್ರ್ಯಾಗ್-ಪ್ರೂಫ್' ಪ್ರೊಫೆಷನಲ್ ಮೇಕಪ್ ಮಾಸ್ಟರ್‌ಕ್ಲಾಸ್


ಮಂಗಳೂರು, ಜು. 26: ಪಾಲೆಮಾರ್ ಇವೆಂಟ್ಸ್ ಸೊಲ್ಯೂಷನ್ ವತಿಯಿಂದ ಮಂಗಳೂರಿನ ಪಾಲೆಮಾರ್ ಗಾರ್ಡನ್‌ನಲ್ಲಿ ಮೊದಲ ಬಾರಿಗೆ ವಿಶ್ವ ದಾಖಲೆ ಪುರಸ್ಕೃತ ಖ್ಯಾತ ಮೇಕಪ್ ತಜ್ಞೆ ಡಾ. ದುರ್ಗಾ ವೆಂಕಟೇಶ್ ಅವರ "ಸ್ಟೀಮ್-ಪ್ರೂಫ್, ಡ್ರ್ಯಾಗ್-ಪ್ರೂಫ್" ಪ್ರೊಫೆಷನಲ್ ಮೇಕಪ್ ಮಾಸ್ಟರ್‌ಕ್ಲಾಸ್ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಿ ಮಾತನಾಡಿ, ಇಂತಹ ತರಬೇತಿ ಕಾರ್ಯಕ್ರಮಗಳು ಮೇಕಪ್ ಕ್ಷೇತ್ರದ ಆಸಕ್ತರು ಮತ್ತು ವೃತ್ತಿಪರರಿಗೆ ಉತ್ತಮ ಅನುಭವ ನೀಡಲಿದ್ದು, ತಮ್ಮ ಕ್ಷೇತ್ರದಲ್ಲಿ ಬೆಳೆಯಲು ಸಹಕಾರಿಯಾಗಲಿವೆ ಎಂದರು. ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದರು.

ಡಾ. ದುರ್ಗಾ ವೆಂಕಟೇಶ್ ಮಾತನಾಡಿ, ಮೊದಲ ಬಾರಿಗೆ ಮಂಗಳೂರಿಗೆ ಬಂದು ತರಬೇತಿ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ತಮ್ಮ ಹಲವು ವರ್ಷಗಳ ಅನುಭವವನ್ನು ಹಂಚಿಕೊಳ್ಳುವ ಮೂಲಕ ಮೇಕಪ್ ಕ್ಷೇತ್ರದಲ್ಲಿ ವೃತ್ತಿಪರ ಕೌಶಲ್ಯವನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ನೆರವಾಗುವುದು ತಮ್ಮ ಉದ್ದೇಶ ಎಂದು ಹೇಳಿದರು. ಮೇಕಪ್ ಒಂದು ವೃತ್ತಿಪರ ಕ್ಷೇತ್ರವಾಗಿದ್ದು, ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡಷ್ಟೂ ಯಶಸ್ಸಿನ ಅವಕಾಶಗಳು ಹೆಚ್ಚುತ್ತವೆ ಎಂದು ಅಭಿಪ್ರಾಯಪಟ್ಟರು.

ಎಂಟು ಬಾರಿ ವಿಶ್ವ ದಾಖಲೆ ನಿರ್ಮಿಸಿರುವ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ. ದುರ್ಗಾ ವೆಂಕಟೇಶ್ ಅವರು ಮೇಕಪ್ ತಜ್ಞೆ, ಶಿಕ್ಷಕಿ ಮತ್ತು ನವೋದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಳೆ, ಬೆವರು ಹಾಗೂ ಆವಿಯಿಂದಲೂ ಹಾಳಾಗದ ವೃತ್ತಿಪರ ಮೇಕಪ್ ತಂತ್ರಗಳ ಕುರಿತು ಅವರು ವಿಶೇಷ ತರಬೇತಿ ನೀಡಿದರು.

ಒಂದು ದಿನದ ಈ ಮಾಸ್ಟರ್‌ಕ್ಲಾಸ್‌ನಲ್ಲಿ 400ಕ್ಕೂ ಹೆಚ್ಚು ಮಂದಿ ಭಾಗವಹಿಸಿ ವೃತ್ತಿಪರ ಮೇಕಪ್ ಕೌಶಲ್ಯಗಳ ಕುರಿತು ತರಬೇತಿ ಪಡೆದರು. ತರಬೇತಿ ಬಳಿಕ ಭಾಗವಹಿಸಿದವರ ಪ್ರಶ್ನೆಗಳಿಗೆ ಡಾ. ದುರ್ಗಾ ವೆಂಕಟೇಶ್ ಉತ್ತರಿಸಿ ಅವರ ಸಂದೇಹಗಳನ್ನು ನಿವಾರಿಸಿದರು.

ಕಾರ್ಯಕ್ರಮವನ್ನು ಪಾಲೆಮಾರ್ ಇವೆಂಟ್ ಸೊಲ್ಯೂಷನ್ ವತಿಯಿಂದ ಲಾವಣ್ಯ ಮತ್ತು ರವಿರಾಜ್ ಸಂಯೋಜಿಸಿದ್ದರು.

Post a Comment

Previous Post Next Post