ಸಮಾಜಸೇವೆ ಮೂಲಕ ಬಡವರ ಕಣ್ಣೀರು ಒರೆಸಿ: ಡಾ. ಸೂರ್ಯ ನಾರಾಯಣ | ರೋಟರಿ ಕ್ಲಬ್ ಮಂಗಳೂರು ಸಿಟಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಂಗಳೂರು : ರೋಟರಿ ಸದಸ್ಯರು ತಮ್ಮ ಕಠಿಣ ಪರಿಶ್ರಮ ಹಾಗೂ ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ, ಬಡವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಬೇಕು ಎಂದು ರೋಟರಿ ಜಿಲ್ಲಾ 3181ರ ಜಿಲ್ಲಾ ನಿಯೋಜಿತ ಗವರ್ನರ್ ಡಾ. ಸೂರ್ಯ ನಾರಾಯಣ ಕರೆ ನೀಡಿದರು.

ನಗರದ ಎ.ಜೆ. ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ರೋಟರಿ ಕ್ಲಬ್ ಮಂಗಳೂರು ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದಗ್ರಹಣ ವಿಧಿ ವಿಧಾನಗಳನ್ನು ನೆರವೇರಿಸಿದ ಅವರು, ಸದಸ್ಯರು ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿ ಸಂಸ್ಥೆಗೆ ಗೌರವ ತರುವಂತೆ ಸಲಹೆ ನೀಡಿದರು.

ನಿರ್ಗಮಿತ ಅಧ್ಯಕ್ಷೆ ಸಜ್ನಾ ಭಾಸ್ಕರ್ ಸ್ವಾಗತಿಸಿ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಪದ್ಮನಾಭ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ವಲಯ ಸಹಾಯಕ ಗವರ್ನರ್ ಡಾ. ಅರವಿಂದ್ ರಾವ್ ಅವರು ಡಾ. ರಂಜನ್ ಅವರ ಸಂಪಾದಕತ್ವದ "ಸಿಟಿ ಬಿಟ್ಸ್ ಆಂಡ್ ಬೈಟ್ಸ್" ಗೃಹವಾರ್ತಾ ಪತ್ರಿಕೆಯನ್ನು ಅನಾವರಣಗೊಳಿಸಿದರು.

ನೂತನ ಅಧ್ಯಕ್ಷ ಸನಿತ್ ಶೇಟ್ ಮಾತನಾಡಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಸೇರಿದಂತೆ ಸಮಾಜಮುಖಿ ಯೋಜನೆಗಳನ್ನು ಈ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಅವುಗಳ ಯಶಸ್ವಿ ಅನುಷ್ಠಾನಕ್ಕೆ ಸದಸ್ಯರ ಸಹಕಾರ ಕೋರಿದರು. ಇದೇ ವೇಳೆ ಪ್ರಿಯಾ ಶೇಟ್ ಹಾಗೂ ಅವಿಲ್ ಲಾರೆನ್ಸ್ ಪಾಯ್ಸ್ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.

ಸಮುದಾಯ ಸೇವಾ ಯೋಜನೆಯಡಿ ನಗರದ ರಿಯಾ ಪ್ರತಿಷ್ಠಾನ ಆಶ್ರಮಕ್ಕೆ ₹60 ಸಾವಿರ ಮೌಲ್ಯದ ಗೃಹೋಪಯೋಗಿ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ರೋಟರಿ ಜಿಲ್ಲಾ 3181ರ ಗವರ್ನರ್ ಸತೀಶ್ ಬೋಳಾರ್ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ವಲಯ ಅಧಿಕಾರಿ ಗಣೇಶ್ ಕೊಡ್ಲಮೊಗರು ಹಾಗೂ ಸಂಸ್ಥೆಯ ಸಲಹೆಗಾರ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ನಿತಿನ್ ದೇವಾಡಿಗ ವಂದಿಸಿದರು.

ನೂತನ ನಿರ್ದೇಶಕರು: ಡಾ. ರಂಜನ್ (ಸಂಸ್ಥೆ ಸೇವೆ), ಗಣೇಶ್ ಕೊಡ್ಲಮೊಗರು (ವೃತ್ತಿಪರ ಸೇವೆ), ಸರಿತಾ ಡಿಸೋಜ (ಸಮಾಜಸೇವೆ), ಪದ್ಮನಾಭ ನಾಯಕ್ (ಅಂತಾರಾಷ್ಟ್ರೀಯ ಸೇವೆ), ಕೆನ್ಯೂಟ್ ಪಿಂಟೊ (ಯುವಜನ ಸೇವೆ), ಪ್ರತಿಭಾ ರಾವ್ (ಕೋಶಾಧಿಕಾರಿ) ಹಾಗೂ ರಾಕೇಶ್ ಶೆಟ್ಟಿ (ದಂಡಾಧಿಕಾರಿ).

Post a Comment

Previous Post Next Post