ಮಂಗಳೂರು: ತುಳುನಾಡು ಮಾತೃಮೂಲ ಸಂಸ್ಕೃತಿಯ ನಾಡಾಗಿದ್ದು, ಹಿಂದೆ ಇಲ್ಲಿ ಮಾತೃಪ್ರಧಾನ ಸಾಮಾಜಿಕ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿಯೂ ಮಹಿಳೆಯರು ತಮ್ಮ ಸ್ಥಾನಮಾನ, ಗೌರವ ಹಾಗೂ ಸಾಮರ್ಥ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಮುಂದೆ ಬರಬೇಕು ಎಂದು ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 'ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ' ಕಾರ್ಯಕ್ರಮದ 14ನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂವಾದ ಯುವ ಸಂಪನ್ಮೂಲ ಕೇಂದ್ರದ ಯೂತ್ ಆಕ್ಷನ್ ಕನ್ವೀನಿಯರ್ ಮಂಜುಳಾ ಸುನಿಲ್ ಮಾತನಾಡಿ, ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಯುವಜನರಲ್ಲಿ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ 'ಬಲೆ ತುಳು ಓದುಗ' ಕಾರ್ಯಕ್ರಮವು ವಿಶಿಷ್ಟ ಪರಿಕಲ್ಪನೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆಯಲ್ಲಿ ಪ್ರಕಟವಾಗಿರುವ ಸಾಹಿತ್ಯ ಕೃತಿಗಳ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಚಾಲಕ ಮನೋಜ್ ಕುಮಾರ್ ವೇಣೂರು ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರದ ವಿವಿಧ ಕಾಲೇಜುಗಳ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕಾಡೆಮಿಯ ಗ್ರಂಥಾಲಯದಲ್ಲಿರುವ ತುಳು ಸಾಹಿತ್ಯ ಕೃತಿಗಳನ್ನು ಓದಿ, ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
Post a Comment