ಕರ್ನಾಟಕದಲ್ಲಿ 84.31 ಲಕ್ಷ ಮತದಾರರಿಗೆ ಶಾಕ್ ! : ಮೊದಲ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಗುರುತು

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಒಟ್ಟು 84,31,612 ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಬ್ಬ ಮತದಾರರ ಮನೆಗಳಿಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಮೃತಪಟ್ಟ ಮತದಾರರ ಮರಣ ಪ್ರಮಾಣಪತ್ರಗಳನ್ನು ಸಂಗ್ರಹಿಸುವುದರ ಜೊತೆಗೆ ಕುಟುಂಬ ಸದಸ್ಯರಿಂದ ಸಹಿ ಪಡೆದು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆ ಆಧರಿಸಿ ಮೊದಲ ಕರಡು ಮತದಾರರ ಪಟ್ಟಿಯಿಂದ 84 ಲಕ್ಷಕ್ಕೂ ಹೆಚ್ಚು ಜನರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮಾಹಿತಿಯಂತೆ, ಕರಡು ಪಟ್ಟಿಯಿಂದ ಹೊರಗಿಡಲು ಗುರುತಿಸಲಾದವರಲ್ಲಿ 51,74,968 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಆಗಿದ್ದು, ಇದು ಅತಿದೊಡ್ಡ ವಿಭಾಗವಾಗಿದೆ. ಇದರ ಜೊತೆಗೆ 14,99,799 ಮಂದಿ ಮೃತಪಟ್ಟ ಮತದಾರರು, 11,61,231 ಮಂದಿ ಯಾವುದೇ ಸುಳಿವು ಸಿಗದವರು, 5,62,572 ಮಂದಿ ನಕಲಿ ಅಥವಾ ಎರಡೆರಡು ಕಡೆ ಮತದಾರರಾಗಿ ಗುರುತಿಸಲ್ಪಟ್ಟವರು ಹಾಗೂ 33,042 ಮಂದಿ ಸಹಿ ಮಾಡಲು ನಿರಾಕರಿಸಿದ ಇತರರು ಸೇರಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲೂ ಆತಂಕಕಾರಿ ಅಂಕಿ-ಅಂಶಗಳು ಹೊರಬಿದ್ದಿವೆ. ಇಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದು, ಇದುವರೆಗೆ ಕೇವಲ 47.97 ಲಕ್ಷ ಮಂದಿ ಮಾತ್ರ ತಮ್ಮ ಅರ್ಜಿಗಳನ್ನು ವಾಪಸ್ ಸಲ್ಲಿಸಿದ್ದಾರೆ. ಸುಮಾರು 39.38 ಲಕ್ಷ ಮತದಾರರ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ 16.57 ಲಕ್ಷ ಮಂದಿ ಇನ್ನೂ ಅರ್ಜಿ ಸಲ್ಲಿಸಬೇಕಿದೆ.

ರಾಜ್ಯದಾದ್ಯಂತ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಇದರಲ್ಲಿ 4,26,75,861 ಅರ್ಜಿಗಳನ್ನು ಸ್ವೀಕರಿಸಿ ಡಿಜಿಟೈಸೇಷನ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈ ಮೂಲಕ ಎಸ್‌ಐಆರ್ ಕಾರ್ಯವು ಶೇ.76.99ರಷ್ಟು ಪ್ರಗತಿ ಸಾಧಿಸಿದೆ. ಇನ್ನೂ 43,24,841 ಮತದಾರರ ಮಾಹಿತಿ ನಿರೀಕ್ಷೆಯಲ್ಲಿದ್ದು, ಆಗಸ್ಟ್ 8ರ ಬಳಿಕ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ. ಇದುವರೆಗೆ 3.22 ಲಕ್ಷ ಆನ್‌ಲೈನ್ ಅರ್ಜಿಗಳು, 2,283 ಫಾರ್ಮ್-6A ಅರ್ಜಿಗಳು ಹಾಗೂ 7.73 ಲಕ್ಷ ಫಾರ್ಮ್-7 ಅರ್ಜಿಗಳು ಸ್ವೀಕೃತವಾಗಿವೆ.

ಇನ್ನೂ ಅರ್ಜಿ ಸಲ್ಲಿಸದ ಮತದಾರರು ಆಗಸ್ಟ್ 8ರೊಳಗೆ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ಶಾಶ್ವತವಾಗಿ ಸ್ಥಳಾಂತರಗೊಂಡಿರುವವರು ಕರ್ನಾಟಕದ ಬೇರೆ ಕ್ಷೇತ್ರದಲ್ಲಿ ವಾಸವಿದ್ದರೆ ಹಾಗೂ ದೇಶದ ಬೇರೆ ಯಾವುದೇ ಸ್ಥಳದಲ್ಲಿ ಮತದಾರರಾಗಿ ನೋಂದಣಿಯಾಗಿಲ್ಲದಿದ್ದರೆ, ಫಾರ್ಮ್-6 ಮೂಲಕ ವಿಳಾಸದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಗತ್ಯ ದಾಖಲೆ ಸಲ್ಲಿಸದಿದ್ದರೆ ಅಂತಿಮ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

Post a Comment

Previous Post Next Post