ಮಂಗಳೂರು | ಆಗಸ್ಟ್ 1ರಂದು 9ನೇ ವರ್ಷದ ‘ಭ್ರಮರೀ ಯಕ್ಷ ವೈಭವ-2026’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು: ಭ್ರಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ವತಿಯಿಂದ ಆಯೋಜಿಸಿರುವ 9ನೇ ವರ್ಷದ ‘ಭ್ರಮರೀ ಯಕ್ಷ ವೈಭವ-2026’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 1, ಶನಿವಾರ ಸಂಜೆ 7 ಗಂಟೆಯಿಂದ ಮರುದಿನ ಮುಂಜಾನೆಯವರೆಗೆ ಕುದ್ರೋಳಿ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ‘ಭ್ರಾಮರೀ ಯಕ್ಷಮಣಿ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಕಲಾವಿದ ಕೆ.ಹೆಚ್.ದಾಸಪ್ಪ ರೈ ಅವರಿಗೆ ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ವನ್ನು ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ, ಕುರ್ನಾಡು ಹಾಗೂ ಕಟೀಲು ಮೇಳದ ನೇಪಥ್ಯ ಕಲಾವಿದ ಮೋನಪ್ಪ ಗೌಡ ಅವರಿಗೆ ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಜೆ.ಕೆ. ಭಟ್ ಸೇರಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಿ. ವೇದವ್ಯಾಸ ಕಾಮತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಜಿ. ರಾಜಾರಾಮ್ ಭಟ್, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ರಾಜಶೇಖರ ಕೋಟ್ಯಾನ್ ಹಾಗೂ ಶ್ರೀಧರ್ ಶೆಟ್ಟಿ ಪುಳಿಂಚ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಸುಪ್ರಸಿದ್ಧ ಹಿಮ್ಮೇಳ-ಮುಮ್ಮೇಳ ಕಲಾವಿದರಿಂದ ‘ಅಂಬಾ ಶಪಥ’, ‘ಲಕ್ಷ್ಮೀ ಸ್ವಯಂವರ’ ಮತ್ತು ‘ತಾಮ್ರಧ್ವಜ ಕಾಳಗ’ ಎಂಬ ಯಕ್ಷಗಾನ ಪ್ರಸಂಗಗಳ ಪೂರ್ಣರಾತ್ರಿ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭ್ರಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಮನವಿ ಮಾಡಿದೆ.

Post a Comment

Previous Post Next Post